'2006ರಲ್ಲಿ ಕಾಶ್ಮೀರ ವಿವಾದ ಕೊನೆಗೆ ಭಾರತ-ಪಾಕ್ ಯತ್ನಿಸಿದ್ದವು'
ಇಸ್ಲಾಮಾಬಾದ್, ಶನಿವಾರ, 24 ಏಪ್ರಿಲ್ 2010( 13:01 IST )
ಕಾಶ್ಮೀರ ವಿವಾದಕ್ಕೆ ಕುರಿತಂತೆ ಪಾಕಿಸ್ತಾನ ಮತ್ತು ಭಾರತಗಳು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 2006ರಲ್ಲಿ ಹತ್ತಿರ ಬಂದಿದ್ದವು. ಈ ಸೂತ್ರ ಯಶಸ್ವಿಯಾಗುತ್ತಿದ್ದರೆ, ಇಲ್ಲಿ ಉಭಯ ದೇಶಗಳೂ ಗೆಲುವು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳಬಾರದು ಎಂಬುದಕ್ಕೆ ಭಾರತ-ಪಾಕ್‌ಗಳು ಒಪ್ಪಿದ್ದವು. ಆದರೆ ಕೊನೆಯ ಹಂತದಲ್ಲಿ ಅದು ತಪ್ಪಿ ಹೋಯಿತು ಎಂದು ಆಗ ವಿದೇಶಾಂಗ ಸಚಿವರಾಗಿದ್ದ ಖುರ್ಷೀದ್ ಮೆಹಮೂದ್ ಕಸೂರಿ ತಿಳಿಸಿದ್ದಾರೆ.
ಕಾಶ್ಮೀರ ವಿವಾದವನ್ನು ಬಗೆಹರಿಸಲು ಎರಡೂ ದೇಶಗಳು ತುಂಬಾ ಹತ್ತಿರಕ್ಕೆ ಬಂದಿದ್ದವು. ಇದೇ ಸಂಬಂಧ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು 2006ರ ಅಂತ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿತ್ತು. ಆದರೆ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಮತ್ತು ಪಾಕಿಸ್ತಾನದ ನ್ಯಾಯಾಂಗ ಸಮಸ್ಯೆಗಳು ಎಲ್ಲಾ ಯತ್ನಗಳನ್ನು ಮಣ್ಣುಪಾಲು ಮಾಡಿದವು ಎಂದು ಕಸೂರಿ ತಿಳಿಸಿದ್ದಾರೆ.
ಪತ್ರಿಕೆಯೊಂದು ಲಾಹೋರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಿಲಿಟರಿ ಸರ್ವಾಧಿಕಾರಿ ಫರ್ವೇಜ್ ಮುಶರಫ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿಯವರನ್ನು 2007ರಲ್ಲಿ ವಜಾಗೊಳಿಸಿದ ನಂತರ ರಾಜಕೀಯ ತುರ್ತು ಪರಿಸ್ಥಿತಿ ಎದುರಾಗಿದ್ದನ್ನು ಉಲ್ಲೇಖಿಸಿದ್ದಾರೆ.
ಆ ಸಂದರ್ಭದಲ್ಲಿ ಎರಡು ದೇಶಗಳ ನಡುವೆ ನಡೆದಿದ್ದ ಮಾತುಕತೆಯ ಪ್ರಕಾರ, ಕಾಶ್ಮೀರ ವಿವಾದ ಪರಿಹಾರದ ನಂತರ ಯಾವ ದೇಶವೂ ಫಲಿತಾಂಶವನ್ನು ಗೆಲುವು ಎಂದು ಹೇಳಿಕೊಳ್ಳುವಂತಿರಲಿಲ್ಲ ಎಂಬುದಕ್ಕೆ ಒಪ್ಪಿಕೊಂಡಿದ್ದವು ಎಂದು ಕಸೂರಿ ಹೇಳಿದ್ದಾರೆ.
ಆಕ್ರಮಿತ ಪ್ರಾಂತ್ಯದಿಂದ ಭಾರತವು ತನ್ನ ಎಲ್ಲಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಕಾಶ್ಮೀರಿಗಳು ಬೇಡಿಕೆಯಿಟ್ಟಿದ್ದರು. ಈ ಮಾತುಕತೆಯಲ್ಲಿ ಪಾಕಿಸ್ತಾನ, ಭಾರತ ಮತ್ತು ಕಾಶ್ಮೀರದ ನಾಯಕರುಗಳು ಪಾಲ್ಗೊಂಡಿದ್ದರು. ಕಾಶ್ಮೀರಿ ಜನತೆಯ ಬಯಕೆಯಂತೆ ಈ ವಿವಾದವನ್ನು ಬಗೆಹರಿಸಲು ಪಾಕಿಸ್ತಾನ ಬಯಸಿತ್ತು ಎಂದು ಕಸೂರಿ ವಿವರಣೆ ನೀಡಿದ್ದಾರೆ.