ಇಸ್ಲಾಮಾಬಾದ್, ಭಾನುವಾರ, 25 ಏಪ್ರಿಲ್ 2010( 11:19 IST )
ಮುಂಬೈ ವಾಣಿಜ್ಯ ನಗರಿ ಮೇಲೆ 2008ರಲ್ಲಿ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನ ವಿಚಾರಣೆಗಾಗಿ ತಮಗೆ ಒಪ್ಪಿಸಿ ಎಂದು ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಶನಿವಾರ ಭಾರತಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಏಳು ಮಂದಿ ಶಂಕಿತ ಉಗ್ರರ ವಿಚಾರಣೆ ಪಾಕಿಸ್ತಾನ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ತಮಗೆ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಕಸಬ್‌ನ ವಿಚಾರಣೆಗೆ ಅವಕಾಶ ಮಾಡಿಕೊಡಬೇಕೆಂದು ಪಾಕ್ ಹೇಳಿದೆ.
ಈಗಾಗಲೇ ಭಾರತದ ರಾಯಭಾರಿ ಶರತ್ ಸಬರ್‌ವಾಲ್ ಅವರೊಂದಿಗೆ ಈ ವಿಷಯದ ಕುರಿತು ಧ್ವನಿ ಎತ್ತಿದ್ದು, ಮುಂಬೈ ದಾಳಿಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂಬ ಪೂರ್ಣ ಮಾಹಿತಿ ಮತ್ತು ಸಾಕ್ಷ್ಯ ಪಡೆಯಲು ಕಸಬ್ ವಿಚಾರಣೆ ಅಗತ್ಯ ಎಂದು ಮಲಿಕ್ ವಿವರಣೆ ನೀಡಿರುವುದಾಗಿಯೂ ತಿಳಿಸಿದ್ದಾರೆ.
ಆದರೆ ಮಾತುಕತೆ ನಡೆದಿರುವುದನ್ನು ಭಾರತೀಯ ಹೈಕಮೀಷನ್ ವಕ್ತಾರ ಸಿದ್ದಾರ್ಥ ಜುಶಿ ಖಚಿತಪಡಿಸಿದ್ದರಾದರೂ ಕೂಡ ಮಲಿಕ್ ಮತ್ತು ಸಬರ್‌ವಾಲ್ ನಡುವಿನ ಮಾತುಕತೆಯ ವಿವರ ತಿಳಿದಿಲ್ಲ ಎಂದು ಹೇಳಿದ್ದಾರೆ.