ಉತ್ತರ ಅಫ್ಘಾನಿಸ್ತಾನದ ಸುಮಾರು ಎಂಬತ್ತು ಶಾಲಾ ವಿದ್ಯಾರ್ಥಿನಿಯರು ಶಂಕಿತ ವಿಷಾನಿಲ ದಾಳಿಯಿಂದ ನರಳುತ್ತಿರುವುದಾಗಿ ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ್ದು, ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ಬಲವಾಗಿ ವಿರೋಧಿಸುತ್ತಿರುವ ತಾಲಿಬಾನ್ ಉಗ್ರರೇ ವಿಷಾನಿಲ ದಾಳಿ ನಡೆಸಿರುವ ಸಾಧ್ಯತೆ ಇದ್ದಿರುವುದಾಗಿ ಶಂಕಿಸಿದ್ದಾರೆ.
ಅಲ್ಲದೇ ಹೊಸ ಬೆಳವಣಿಗೆಯೊಂದರಲ್ಲಿ ಭಾನುವಾರ 12 ವಿದ್ಯಾರ್ಥಿನಿಯರು ವಿಷಾನಿಲ ದಾಳಿಯಿಂದ ನರಳುತ್ತಿರುವುದಾಗಿ ಕುಂಡುಜ್ ಪ್ರಾಂತ್ಯದ ವಕ್ತಾರ ಮಾಬೋಬುಲ್ಲಾ ಸೈಯದಿ ತಿಳಿಸಿದ್ದಾರೆ.
ವಿಷಾನಿಲ ದಾಳಿಯಿಂದ ನರಳುತ್ತಿರುವ ಹೆಚ್ಚಿನ ವಿದ್ಯಾರ್ಥಿನಿಯರ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ವರಿಷ್ಠ ಅಬ್ದುಲ್ ರಜಾಕ್ ಹೇಳಿದ್ದು, ಈ ಕೃತ್ಯದ ಹಿಂದೆ ತಾಲಿಬಾನ್ ಉಗ್ರರ ಕೈವಾಡ ಇರುವುದಾಗಿ ದೂರಿದ್ದಾರೆ.
ನಾನು ತರಗತಿಯಲ್ಲಿ ಕುಳಿತಿರುವಾಗ ಹೂವಿನ ಸುವಾಸನೆಯಂತ ವಾಸನೆ ಮೂಗಿಗೆ ಬಡಿದಿರುವುದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಲ್ಲಿ ಒಬ್ಬಳಾದ ಸುಮೈಲಾ ತಿಳಿಸಿದ್ದಾಳೆ. ಈ ಸಂದರ್ಭದಲ್ಲಿ ನನ್ನ ಸಹಪಾಠಿಗಳು ಮತ್ತು ಟೀಚರ್ ಕುಸಿದು ಬಿದ್ದಿರುವುದನ್ನು ಗಮನಿಸಿದ್ದೆ, ನಾನು ಕೂಡ ಕಣ್ಣು ತೆರೆದಿರುವುದು ಆಸ್ಪತ್ರೆಯಲ್ಲಿಯೇ ಎಂದು ವಿವರಿಸಿದ್ದಾಳೆ.