ಮೈಮಾಟದ ಪ್ರದರ್ಶನಕ್ಕೆ ಅವಕಾಶವಾಗುವಂತಹ ಬಟ್ಟೆ ಧರಿಸಿಕೊಂಡ ಸ್ತ್ರೀಯರಿಂದಾಗಿ ವಿವಾಹಯೇತರ ಸಂಬಂಧಗಳು ಹೆಚ್ಚಿ, ಈ ಕಾರಣದಿಂದಾಗಿ ದೇಶದಲ್ಲಿ ಭೂಕಂಪಗಳು ಸಂಭವಿಸುತ್ತಿವೆ ಎಂದು ಇರಾನ್ ಧಾರ್ಮಿಕ ಮುಖಂಡರೊಬ್ಬರು ಹೇಳಿಕೆ ಕೊಟ್ಟ ಬೆನ್ನಲ್ಲೇ ಪಶ್ಚಿಮ ನೇಪಾಳದ ಶಾಲೆಯೊಂದು ಬಾಲಕಿಯರಲ್ಲಿ ಮುಟ್ಟಾಗಲು (ಋತುಮತಿ) ಆರಂಭಿಸಿದ್ದರಿಂದ ದೇವರು ಸಿಟ್ಟಿಗೇಳುತ್ತಾನೆಂದು 29 ವಿದ್ಯಾರ್ಥನಿಯರನ್ನು ಹೊರಗಟ್ಟಿರುವ ಅಮಾನವೀಯ ಘಟನೆ ನಡೆದಿದೆ.
'ಪುಷ್ಪವತಿ'ಯರಾಗಲು ಆರಂಭಿಸಿದ್ದ ನೇಪಾಳದ ಡೋಟಿಯಲ್ಲಿನ ಸಿದ್ದೇಶ್ವರ್ ಹೈಯರ್ ಸೆಕಂಡರಿ ಶಾಲೆಯ ಸುಮಾರು 29 ವಿದ್ಯಾರ್ಥಿನಿಯರನ್ನು ಶಾಲೆಯಿಂದ ವಜಾಗೊಳಿಸಲಾಗಿದೆ ಎಂದು ನಾಯಾ ಪತ್ರಿಕಾ ವರದಿ ತಿಳಿಸಿದೆ.
ವಿದ್ಯಾರ್ಥಿನಿಯರು ರಜಸ್ವಲೆಯರಾಗಿದ್ದರಿಂದ ದೇವರು ಸಿಟ್ಟಾಗುತ್ತಾನೆ, ಅಲ್ಲದೇ ಈ ನೋವಿನ ಹಿಸ್ಟರಿಯಾ ಉಳಿದ ವಿದ್ಯಾರ್ಥಿನಿಯರಿಗೂ ಹರಡುವ ಭಯದಿಂದಾಗಿ ನಾವು 29 ವಿದ್ಯಾರ್ಥಿನಿಯರನ್ನು ಹಾಸ್ಟೆಲ್‌ನಿಂದಲೂ ಹೊರಹಾಕಿರುವುದಾಗಿ ಹಾಸ್ಟೆಲ್ ವಕ್ತಾರರೊಬ್ಬರು ವಿವರಿಸಿರುವುದಾಗಿ ವರದಿ ಹೇಳಿದೆ.
ಐದು ವರ್ಷಗಳ ಹಿಂದೆ ಈ ಮೂಢನಂಬಿಕೆಗೆ ನೇಪಾಳದಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಮತ್ತೆ ಅಂತಹ ಅಮಾನವೀಯ ಸಂಪ್ರದಾಯವನ್ನು ಮುಂದುವರಿಸಲಾಗುತ್ತಿದೆ. ಮಹಿಳೆಯರು ಋತುಮತಿಯರಾದ ಸಂದರ್ಭದಲ್ಲಿ ಅವರು ಅಪವಿತ್ರರಾಗಿರುತ್ತಾರೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
ನೇಪಾಳದಲ್ಲಿಯೂ ಇಂದಿಗೂ ಕೂಡ ಹಲವು ಕುಟುಂಬಗಳಲ್ಲಿ ಯುವತಿಯರು ಬಹಿಷ್ಠೆಯರಾದ ಸಂದರ್ಭದಲ್ಲಿ ಮನೆಯಲ್ಲಿ ಮಲಗಲು ಅವಕಾಶ ನೀಡದೆ, ಅಂತವರು ದನದ ಕೊಟ್ಟಿಗೆಯಲ್ಲಿಯೇ ಮಲಗಬೇಕು. ಆ ಸಂದರ್ಭದಲ್ಲಿ ಶಾಲೆಗೂ ಹೋಗುವಂತಿಲ್ಲ. ಮುಟ್ಟಾದ ಸಮಯದಲ್ಲಿ ಯುವತಿಯರು ಮರ ಅಥವಾ ಮನುಷ್ಯರನ್ನು ಮುಟ್ಟಿದರೆ ಸಾಯುತ್ತಾರೆಂಬುದು ಕೂಡ ಮತ್ತೊಂದು ನಂಬಿಕೆಯಂತೆ!
ಈ ಅನಿಷ್ಠ ಮೂಢನಂಬಿಕೆ ವಿರುದ್ಧ ಐದು ವರ್ಷಗಳ ಹಿಂದೆ ನೇಪಾಳ ಸುಪ್ರೀಂಕೋರ್ಟ್ ಮೂಢನಂಬಿಕೆ ಸಂಪ್ರದಾಯಕ್ಕೆ ನಿಷೇಧ ಹೇರಿ, ಇದಕ್ಕೆ ಸೂಕ್ತ ಕಾನೂನನ್ನು ಜಾರಿಗೊಳಿಸುವಂತೆ ನೇಪಾಳ ಸರ್ಕಾರಕ್ಕೆ ಸೂಚಿಸಿತ್ತು.
ಆ ನಿಟ್ಟಿನಲ್ಲಿ ಈಗಲೂ ನೇಪಾಳದ ಶಾಲೆಯಲ್ಲಿ ಇಂತಹ ಅನಿಷ್ಠ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಕಾರ್ಯಕರ್ತರು ಆಗ್ರಹಿಸಿರುವುದಾಗಿ ವರದಿ ತಿಳಿಸಿದೆ.