ಆತ್ಮಹತ್ಯಾ ದಾಳಿಕೋರನೊಬ್ಬ ಯೆಮೆನ್‌ನಲ್ಲಿರುವ ಬ್ರಿಟನ್ ರಾಯಭಾರಿಯೊಬ್ಬರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಅವರು ಪವಾಡಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್ ರಾಯಭಾರಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತಾದರೂ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಪರಿಚಿತ ಆತ್ಮಹತ್ಯಾ ದಾಳಿಕೋರನೊಬ್ಬ ಈ ದಾಳಿಯನ್ನು ನಡೆಸಿದ್ದು, ಆತನ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಛಿದ್ರ, ಛಿದ್ರವಾಗಿ ಹೋಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಯೆಮೆನ್‌ನಲ್ಲಿ ಬ್ರಿಟನ್ ರಾಯಭಾರಿಯಾಗಿರುವ ತಿಮೋತಿ ಅಚಿಲ್ಲೆ ಟೋರ್‌ಲೊಟ್ ಅವರನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿತ್ತು ಎಂದು ರಾಯಭಾರಿ ಕಚೇರಿ ವೆಬ್‌ಸೈಟ್ ತಿಳಿಸಿದೆ.