ಸಾರ್ಕ್ ಶಂಗ; ಸಿಂಗ್-ಗಿಲಾನಿ ಮಾತುಕತೆ ತಳ್ಳಿ ಹಾಕಲ್ಲ: ಕೃಷ್ಣ
ತಿಂಫು, ಸೋಮವಾರ, 26 ಏಪ್ರಿಲ್ 2010( 15:53 IST )
ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳ ನಡುವಿನ ಮಾತುಕತೆ ಸಾಧ್ಯತೆಯ ಸೂಚನೆಗಳು ಇದೇ ಮೊದಲ ಬಾರಿ ಅಧಿಕೃತವಾಗಿ ಭಾರತದ ಕಡೆಯಿಂದ ಬಂದಿದ್ದು, ದ್ವಿಪಕ್ಷೀಯ ಮಾತುಕತೆ ಅಸಾಧ್ಯವೇನಲ್ಲ ಎಂದು ಸಾರ್ಕ್ ಶೃಂಗಸಭೆಗಾಗಿ ಭೂತಾನ್‌ಗೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಏಪ್ರಿಲ್ 28ರಿಂದ 29ರವರೆಗೆ ಭೂತಾನ್‌ನ ತಿಂಫುವಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಗಾಗಿ ಬರಲಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮಾತುಕತೆ ನಡೆಸುವರೇ ಎಂಬ ಪ್ರಶ್ನೆಗೆ, 'ಅದನ್ನು ನಾನು ತಳ್ಳಿ ಹಾಕುತ್ತಿಲ್ಲ' ಎಂದು ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಕೆಲವು ದಿನಗಳ ಕಾಲ ಬಹುಪಕ್ಷೀಯ ಮಾತುಕತೆಗಾಗಿ ಹಲವು ರಾಷ್ಟ್ರಗಳ ಮತ್ತು ಸರಕಾರಗಳ ಮುಖಂಡರು ಒಂದೇ ಛಾವಣಿಯಡಿ ಸೇರಲಿರುವುದರಿಂದ ಈ ಸಂದರ್ಭದಲ್ಲಿ ಕೆಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಏನೇನಾಗುತ್ತವೆ ಎಂಬುದನ್ನು ಕಾದು ನೋಡಿ ಎಂದಿರುವ ಕೃಷ್ಣ, ಪ್ರಧಾನ ಮಂತ್ರಿಗಳು ಪರಸ್ಪರ ಭೇಟಿಯಾಗುವ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ದ್ವಿಪಕ್ಷೀಯ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂದರು.
ಮುಂಬೈ ದಾಳಿ ಆರೋಪಿ ಅಜ್ಮಲ್ ಕಸಬ್ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಭಾರತದ ನ್ಯಾಯಾಧೀಶರುಗಳ ಪ್ರಮಾಣಿತ ಹೇಳಿಕೆಯನ್ನು ಬಯಸುತ್ತಿರುವ ಪಾಕಿಸ್ತಾನದ ಮನವಿಯ ಕುರಿತು ಪ್ರಶ್ನಿಸಿದಾಗ, ಈ ಕುರಿತು ಇನ್ನಷ್ಟೇ ಗಮನ ಹರಿಸಬೇಕಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಪಾಕಿಸ್ತಾನದಿಂದ ಬಂದಿರುವ ಮನವಿಯನ್ನು ನಾನು ಕಳೆದ ರಾತ್ರಿ ಸ್ವೀಕರಿಸಿದ್ದೇನೆ, ಅದರೆ ಇನ್ನಷ್ಟೇ ಅದನ್ನು ನೋಡಬೇಕಿದೆ. ಕಸಬ್ ವಿಚಾರಣೆ ಭಾರತದಲ್ಲಿ ಆರಂಭಿಕ ಹಂತದಲ್ಲಷ್ಟೇ ಇದೆ. ಇನ್ನಷ್ಟೇ ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಹಾಗಾಗಿ ಈಗಲೇ ಯಾವುದನ್ನೂ ಹೇಳಲಾಗದು ಎಂದು ಸಚಿವರು ಸ್ಪಷ್ಟಪಡಿಸಿದರು.
ಕಸಬ್‌ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕು ಎಂಬ ಪಾಕಿಸ್ತಾನದ ಮನವಿ ಕುರಿತು, ನಮ್ಮ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಾವು ಪಾಕಿಸ್ತಾನದ ಮನವಿಯನ್ನು ಪರಿಶೀಲನೆ ನಡೆಸುತ್ತೇವೆ ಎಂದಷ್ಟೇ ಕೃಷ್ಣ ತಿಳಿಸಿದ್ದಾರೆ.