ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೋಯಿಬ್‌ಗೆ ಪಾಕ್‌ನಲ್ಲೂ ಕೇಸು; ಸಾನಿಯಾ ಕುಟುಂಬ ಅತೃಪ್ತಿ (Shoaib Malik | Sania Mirza | Pakistan | Marriage)
Bookmark and Share Feedback Print
 
ಶೋಯಿಬ್ ಮಲಿಕ್ ಪಾಕಿಸ್ತಾನದ ಸಾಯಿಲ್‌ಕೋಟ್‌ನಲ್ಲಿ ಆಯೋಜಿಸಿದ್ದ ಆರತಕ್ಷತೆಯಲ್ಲಿ ಅವ್ಯವಸ್ಥೆಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ ಸಾನಿಯಾ ಮಿರ್ಜಾ ಕುಟುಂಬವು ಕಾರ್ಯಕ್ರಮ ಮುಗಿಯುವ ಮೊದಲೇ ಅಲ್ಲಿಂದ ಹೊರಟು ಹೋಗಿದ್ದರೆ, ಅದರ ಬೆನ್ನಿಗೆ ಪಾಕ್ ಕ್ರಿಕೆಟಿಗನ ಮದುವೆ ಕಾರ್ಯಕ್ರಮದಲ್ಲಿ ಸರಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇಲೆ ಎರಡೆರಡು ಕೇಸುಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಸನ್ ಶೆರಾಜ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಲಾಹೋರ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸರಕಾರದ ನಿಯಮದಂತೆ ಒಬ್ಬರಿಗೆ ಒಂದು ಖಾದ್ಯ ಮತ್ತು ರಾತ್ರಿ 10 ಗಂಟೆಗೆ ಕಾರ್ಯಕ್ರಮವನ್ನು ಮುಗಿಸಬೇಕೆಂಬುದಕ್ಕೆ ಅವರು ಬದ್ಧರಾಗದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
PTI

ಅಲ್ಲದೆ ಅಲಂಕಾರಿಕ ಲೈಟ್ ಬಳಕೆ ಮೇಲಿರುವ ನಿಷೇಧವನ್ನು ಕೂಡ ಶೋಯಿಬ್ ಕಾರ್ಯಕ್ರಮದಲ್ಲಿ ಉಲ್ಲಂಘಿಸಲಾಗಿದೆ. ಸಾಯಿಲ್‌ಕೋಟ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಮದುವೆ ಕಾರ್ಯಕ್ರಮ ನಿನ್ನೆ ಮಧ್ಯರಾತ್ರಿಯವರೆಗೆ ನಡೆದಿತ್ತು. ಸರಕಾರಿ ನಿಯಮಗಳನ್ನು ಉಲ್ಲಂಘಿಸಿರುವ ಶೋಯಿಬ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತೊಂದು ಕೇಸು ದಾಖಲಾಗಿರುವುದು ಲಾಹೋರ್ ಸೆಷನ್ಸ್ ನ್ಯಾಯಾಲಯದಲ್ಲಿ. ಶೋಯಿಬ್ ಅವರ ಸಂಬಂಧಿಯೊಬ್ಬರಿಂದ 15,000 ರೂಪಾಯಿಗಳಿಗೆ ಕಾರ್ಯಕ್ರಮದ ಆಹ್ವಾನ ಪತ್ರವನ್ನು ಪಡೆದುಕೊಂಡಿರುವ ಹೊರತಾಗಿಯೂ ನನಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಆರೋಪಿಸಿರುವ ಸಫ್ದಾರ್ ಆಲಿ ಪ್ರಕರಣ ದಾಖಲಿಸಿದ್ದಾರೆ.

ಈ ಎರಡೂ ಪ್ರಕರಣಗಳು ಸೋಮವಾರ ದಾಖಲಾಗಿದ್ದು, ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ಆಹ್ವಾನವಿಲ್ಲದವರೂ ಬಂದಿದ್ದರು...
ನಿನ್ನೆ ರಾತ್ರಿ ಸಾಯಿಲ್‌ಕೋಟ್‌ನಲ್ಲಿ ನಡೆದಿದ್ದ ಔತಣಕೂಟದಲ್ಲಿ ಆಹ್ವಾನವಿಲ್ಲದವರೂ ಬಂದು ಸಾಕಷ್ಟು ರಾದ್ದಾಂತ ಎಬ್ಬಿಸಿದ್ದರು. ಶೋಯಿಬ್ ಅವರ ಹತ್ತಿರದ ಸಂಬಂಧಿಗಳು ಆಹ್ವಾನ ಪತ್ರಿಕೆಗಳನ್ನು ಐದರಿಂದ ಹದಿನೈದು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದರಿಂದ ಈ ಗೋಜಲು ಪರಿಸ್ಥಿತಿ ಸೃಷ್ಟಿಯಾಗಿತ್ತು.

ಮದುವೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆಹ್ವಾನ ಪತ್ರಿಕೆ ಹೊಂದಿದ್ದ ಅತಿಥಿಗಳಿಗೆ ಮಾತ್ರ ಪ್ರವೇಶ ಅವಕಾಶವಿತ್ತು. ಇದೇ ಕಾರಣದಿಂದ ಶೋಯಿಬ್ ಸಂಬಂಧಿಗಳು ಆಹ್ವಾನ ಪತ್ರಿಕೆಯನ್ನು ಬೇಕಾದವರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ ಪ್ರವಾಹೋಪಾದಿಯಲ್ಲಿ ಜನ ಆಹ್ವಾನ ಪತ್ರಿಕೆಯೊಂದಿಗೆ ಕ್ರೀಡಾಂಗಣಕ್ಕೆ ಬಂದಾಗ ಗೋಜಲು ಪರಿಸ್ಥಿತಿ ಉಂಟಾಗಿತ್ತು ಎಂದು ಮೂಲಗಳು ಹೇಳಿವೆ.

ಅಸಮಾಧಾನಗೊಂಡ ಸಾನಿಯಾ ಕುಟುಂಬ...
ಸಿಕ್ಕಸಿಕ್ಕವರೆಲ್ಲ ಕಾರ್ಯಕ್ರಮಕ್ಕೆ ನುಗ್ಗುತ್ತಿರುವುದರಿಂದ ಶೋಯಿಬ್ ಮತ್ತು ಸಾನಿಯಾ ತೀವ್ರ ಅಸಮಾಧಾನಗೊಂಡಿದ್ದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಆಹ್ವಾನ ಪತ್ರಿಕೆ ಇದ್ದವರನ್ನೂ ಒಳಗೆ ಬಿಡದೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಆರಂಭಿಸಿದರು.

ಈ ಹೊತ್ತಿನಲ್ಲಿ ಶೋಯಿಬ್ ಬಾವ ನಾಸಿರ್ ಮಲಿಕ್ ಅವರನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೋಲೀಸರು ಅವಕಾಶ ನೀಡಲಿಲ್ಲ. ಕಾರ್ಯಕ್ರಮಕ್ಕೆ ಬಂದಿದ್ದ ಸಾನಿಯಾ ಕುಟುಂಬ ಇಂತಹ ಅವ್ಯವಸ್ಥೆಗಳಿಂದ ಅಸಮಾಧಾನಗೊಂಡಿತ್ತಲ್ಲದೆ, ಸ್ವಲ್ಪವೇ ಹೊತ್ತಿನಲ್ಲಿ ಸ್ಥಳದಿಂದ ನಿರ್ಗಮಿಸಿತ್ತು. ಆ ನಂತರ ಸಾನಿಯಾ ಮತ್ತು ಶೋಯಿಬ್ ಕೂಡ ಹೆಚ್ಚು ಹೊತ್ತು ಅಲ್ಲಿರಲಿಲ್ಲ ಎಂದು ವರದಿಗಳು ಹೇಳಿವೆ.

3.5 ಕೋಟಿ ರೂಪಾಯಿ ಕೇಳಿದ ಶೋಯಿಬ್...
ನಿನ್ನೆ ಸಾಯಿಲ್‌ಕೋಟ್‌ನಲ್ಲಿ ನಡೆದ ಔತಣಕೂಟ ಮತ್ತು ನಾಳೆ ಲಾಹೋರ್‌ನ ಪರ್ಲ್ ಕಾಂಟಿನೆಂಟಲ್ ಹೊಟೇಲಿನಲ್ಲಿ ನಡೆಯಲಿರುವ ವಾಲಿಯಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ 3.5 ಕೋಟಿ ರೂಪಾಯಿಗಳನ್ನು ನೀಡುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಶೋಯಿಬ್ ಮಲಿಕ್ ಮಾಧ್ಯಮಗಳ ಮುಂದೆ ಬೇಡಿಕೆಯಿಟ್ಟಿದ್ದರಂತೆ.

ಯಾವ ಟಿವಿ ವಾಹಿನಿ 3.5 ಕೋಟಿ ರೂಪಾಯಿ ನೀಡುತ್ತದೋ, ಅವರಿಗೆ ನಮ್ಮ ಮದುವೆ ಕಾರ್ಯಕ್ರಮಗಳ ಪ್ರಸಾರಕ್ಕೆ ಅನುಮತಿ ನೀಡಲಾಗುತ್ತದೆ. ಇಲ್ಲದೇ ಇದ್ದರೆ ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿದ್ದ ಶೋಯಿಬ್, ಇದನ್ನು ಭದ್ರತಾ ಸಿಬ್ಬಂದಿಗಳಿಗೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಆದರೆ ಇಷ್ಟೊಂದು ದುಬಾರಿ ಹಣ ನೀಡಿ ಪ್ರಸಾರ ಹಕ್ಕುಗಳನ್ನು ಪಡೆದುಕೊಳ್ಳಲು ಯಾವುದೇ ಟಿವಿ ಚಾನೆಲ್ ಮುಂದಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ