ಸಿಖ್ ಬಂಡುಕೋರರು ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರ ಚಟುವಟಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೆನಡಾ, ಸಿಖ್ ಉಗ್ರರ ಬೆದರಿಕೆಯನ್ನೂ ಸಹಿಸುವುದಿಲ್ಲ ಎಂದು ಸೋಮವಾರ ಕಟುವಾಗಿ ಎಚ್ಚರಿಸಿದೆ.
ಕಳೆದ ವಾರ ಕೆನಡಾದ ಮಾಜಿ ಸಚಿವ ಭಾರತೀಯ ಮೂಲದ ಉಜ್ವಲ್ ಡೋಸಾನ್‌ಜಿ ಅವರಿಗೆ ಸಿಖ್ ಬಂಡುಕೋರರು ಎಚ್ಚರಿಕೆ ನೀಡಿದ ನಂತರ ಕೆನಡಾ ಈ ಪ್ರತಿಕ್ರಿಯೆ ನೀಡಿದೆ.
ಕೆನಡಾದ ಸಿಖ್ ಬಂಡುಕೋರ ಸಮುದಾಯ ಹಿಂಸಾಚಾರ ನಡೆಸುತ್ತೇವೆ ಎಂಬ ಹೇಳಿಕೆಯನ್ನು ಬಲವಾಗಿ ಖಂಡಿಸುವುದಾಗಿ ಭಾರತೀಯ ಮೂಲದ ಕೆನಡಾ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ದೀಪಕ್ ಓಬೇರಾಯ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡುತ್ತ ತಿಳಿಸಿದರು. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂಬುದಾಗಿಯೂ ಹೇಳಿದರು.
ಕೆನಡಾದ ಸುರ್ರೆ ಪ್ರದೇಶದಲ್ಲಿ ಕಳೆದ ವಾರ ನಡೆದ ವೈಶಾಖಿ ಪರೇಡ್‌ಗೆ ಡೋಸಾನ್‌ಜಿ ಆಗಮಿಸಿದರೆ ಎಚ್ಚರ ಎಂಬ ಸಂದೇಶವನ್ನು ಸಿಖ್ ಸಮುದಾಯದ ಖಾಲಿಸ್ತಾನ್ ಬಂಡುಕೋರರು ಸಂದೇಶ ರವಾನಿಸಿದ್ದರು.
ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಬಂಡುಕೋರರ ಯಾವುದೇ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ದೀಪಕ್ ಹೌಸ್ ಆಫ್ ಕಾಮನ್ಸ್‌ಗೆ ತಿಳಿಸಿದರು.