ದಕ್ಷಿಣ ಹೈನಾನ್ ಪ್ರಾಂತ್ಯದಲ್ಲಿ ಚೀನಾ ಬೃಹತ್ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದ್ದು, ಯೋಜನೆಯ ಕಾಮಗಾರಿ ಆರಂಭಗೊಂಡಿದೆ ಎಂದು ವರದಿಗಳು ಹೇಳಿವೆ.
ಹೈನಾನ್ ಪ್ರಾಂತ್ಯದ ಚಾಂಗ್‌ಜಿಯಾಂಗ್ ಕಂಟ್ರಿ ಎಂಬಲ್ಲಿ ಭಾನುವಾರ ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಸುಮಾರು 2.78 ಬಿಲಿಯನ್ ಡಾಲರ್ ನಿರ್ಮಾಣ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.
ಈ ನೂತನ ಸ್ಥಾವರವು 650,000 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಜಲ ರಿಯಾಕ್ಟರುಗಳನ್ನು ಹೊಂದಿದೆ. 2014ರ ಹೊತ್ತಿಗೆ ಮೊದಲ ರಿಯಾಕ್ಟರ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪ್ರಾಂತೀಯ ಸರಕಾರ ತಿಳಿಸಿದೆ.
ಚೀನಾದ ಅಣು ವಿದ್ಯುತ್ ಕ್ಷೇತ್ರದ ದೈತ್ಯ ಕಂಪನಿಗಳಾದ ಚೀನಾ ನ್ಯಾಷನಲ್ ನ್ಯೂಕ್ಲಿಯರ್ ಕಾರ್ಪೋರೇಷನ್ (ಸಿಎನ್‌ಎನ್‌ಸಿ) ಮತ್ತು ಚೀನಾ ಹುವಾನೆಂಗ್ ಗ್ರೂಪ್‌ಗಳು (ಸಿಎಚ್‌ಜಿ) ಯೋಜನೆಗೆ ಆರ್ಥಿಕ ಮತ್ತು ಅಭಿವೃದ್ಧಿ ನೆರವು ನೀಡಲಿವೆ.