ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ನಡುವಿನ ಮಾತುಕತೆ ಬಗ್ಗೆ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿರುವ ಪಾಕಿಸ್ತಾನ, ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿಕೊಳ್ಳುವುದೇ ವಿವೇಚನಾಯುತ ಮಾರ್ಗ ಎಂದು ಹೇಳಿದೆ.
ನಾಳೆ ಆರಂಭವಾಗಲಿರುವ ಸಾರ್ಕ್ ಶೃಂಗಸಭೆಯ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಜತೆ ಕಾಣಿಸಿಕೊಂಡ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಭಾರತ ಜತೆ ಸುಂದರವಾದ ಸಂಬಂಧ ಬೆಳೆಸಿಕೊಳ್ಳಲು ಉತ್ಸುಕತೆ ವ್ಯಕ್ತಪಡಿಸಿದರು.
ತಿಂಫುನಲ್ಲಿನ ತಂಪಾದ ವಾತಾವರಣವು ಉಭಯ ದೇಶಗಳ ಸಂಬಂಧದಲ್ಲಿ ಪರಿಣಾಮವನ್ನುಂಟು ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿನ ವಾತಾವರಣ ಸುಂದರವಾಗಿದೆ. ಭಾರತ ಮತ್ತು ಪಾಕ್ ನಡುವಣ ಸಂಬಂಧವು ಅಷ್ಟೇ ಸುಂದರವಾಗಬೇಕೆಂದು ನೀವು ಬಯಸುವುದಿಲ್ಲವೇ ಎಂದು ವರದಿಗಾರರಲ್ಲಿ ಮರು ಪ್ರಶ್ನಿಸಿದರು.
ಸಾರ್ಕ್ ಶೃಂಗ ಸಭೆಗಾಗಿ ಬರಲಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ನಡುವೆ ಮಾತುಕತೆ ನಡೆಯಲಿದೆಯೇ ಎಂಬ ಪ್ರಶ್ನೆಗೆ, 'ನಾವು ಮಾತುಕತೆಯ ಕುರಿತು ಮಾತನಾಡಬಹುದು. ಯಾರೂ ಕೂೂಡ ಭರವಸೆಯಲ್ಲಿ ಬದುಕಬಹುದು. ಮಾತುಕತೆಯೊಂದೇ ಉಭಯ ದೇಶಗಳ ಮುಂದಿರುವ ಅತ್ಯುತ್ತಮ ಮಾರ್ಗ' ಎಂದು ಖುರೇಷಿ ಹೇಳಿದರು.
ಭೂತಾನ್‌ನ ತಿಂಫುನಲ್ಲಿ ಆರಂಭವಾಗಲಿರುವ ಸಾರ್ಕ್ ಸಮ್ಮೇಳನಕ್ಕೂ ಮೊದಲು ನಡೆದ ಸಾರ್ಕ್ ಸಚಿವರುಗಳ ಸಮಿತಿ ಉದ್ಘಾಟನೆ ನಂತರ ಖುರೇಷಿ ಮತ್ತು ಕೃಷ್ಣ ಜತೆಯಾಗಿ ಕಾಣಿಸಿಕೊಂಡರು.
ಈ ಬಗ್ಗೆ ಕೃಷ್ಣರಲ್ಲಿ ವಿಚಾರಿಸಿದಾಗ, ಬುಧವಾರ ಪ್ರಧಾನಿ ಸಿಂಗ್ ಆಗಮನದ ನಂತರವೇ ಈ ಬಗ್ಗೆ ತೀರ್ಮಾನವಾಗಲಿದೆ ಎಂದವರು ಹೇಳಿದರು. ಪ್ರಧಾನಿಯ ಆಗಮನದ ನಂತರ ಉಭಯ ದೇಶಗಳ ಸಂಬಂಧ ವೃದ್ದಿ ಮಾತುಕತೆಗಾಗಿ ವೇಳಾಪಟ್ಟಿ ನಿಗದಿಸುವ ಬಗ್ಗೆ ನಾವು ಯೋಚಿಸಲಿದ್ದೇವೆ ಎಂದವರು ಹೇಳಿದರು.
ಸಾರ್ಕ್ ಶೃಂಗಸಭೆಯು ನಾಳೆ ಆರಂಭವಾಗಲಿದ್ದು, ಸಿಂಗ್-ಗಿಲಾನಿ ಭೇಟಿ ಬಗ್ಗೆ ಅಪಾರ ನಿರೀಕ್ಷೆಯಿದೆ.