ಶೋಯಿಬ್ ಮಲಿಕ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ದೂರು ದಾಖಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ್ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಇತ್ತೀಚೆಗೆ ಶೋಯಿಬ್ ಮಲಿಕ್ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಆಯೋಜಿಸಿದ್ದ ಆರತಕ್ಷತೆಯಲ್ಲಿ ಅವ್ಯವಸ್ಥೆಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ ಸಾನಿಯಾ ಮಿರ್ಜಾ ಕುಟುಂಬವು ಕಾರ್ಯಕ್ರಮ ಮುಗಿಯುವ ಮೊದಲೇ ಅಲ್ಲಿಂದ ಹೊರಟು ಹೋಗಿದ್ದರೆ, ಅದರ ಬೆನ್ನಿಗೆ ಪಾಕ್ ಕ್ರಿಕೆಟಿಗನ ಮದುವೆ ಕಾರ್ಯಕ್ರಮದಲ್ಲಿ ಸರಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇಲೆ ಎರಡೆರಡು ಕೇಸುಗಳನ್ನು ದಾಖಲಿಸಲಾಗಿತ್ತು.
ಹಸನ್ ಶೆರಾಜ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಲಾಹೋರ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಸರಕಾರದ ನಿಯಮದಂತೆ ಒಬ್ಬರಿಗೆ ಒಂದು ಖಾದ್ಯ ಮತ್ತು ರಾತ್ರಿ 10 ಗಂಟೆಗೆ ಕಾರ್ಯಕ್ರಮವನ್ನು ಮುಗಿಸಬೇಕೆಂಬುದಕ್ಕೆ ಅವರು ಬದ್ಧರಾಗದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಲ್ಲದೆ ಅಲಂಕಾರಿಕ ಲೈಟ್ ಬಳಕೆ ಮೇಲಿರುವ ನಿಷೇಧವನ್ನು ಕೂಡ ಶೋಯಿಬ್ ಕಾರ್ಯಕ್ರಮದಲ್ಲಿ ಉಲ್ಲಂಘಿಸಲಾಗಿದೆ. ಸಾಯಿಲ್‌ಕೋಟ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಮದುವೆ ಕಾರ್ಯಕ್ರಮದಲ್ಲಿಸರಕಾರಿ ನಿಯಮಗಳನ್ನು ಉಲ್ಲಂಘಿಸಿರುವ ಶೋಯಿಬ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು.
ಆದರೆ ಪ್ರಕರಣದ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಖ್ವಾಜಾ ಮುಹಮ್ಮದ್ ಶರೀಫ್, ಅರ್ಜಿದಾರರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿಫಲರಾಗಿರುವ ಹಿನ್ನೆಯಲ್ಲಿ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿದರು.
ಅಲ್ಲದೇ, ಹಸನ್ ಶೆರಾಜ್ ಅವರು, ಶೋಯಿಬ್ ಆರತಕ್ಷತೆ ಕಾರ್ಯಕ್ರಮಕ್ಕೆ 5ಮಿಲಿಯನ್ ಹಣ ವ್ಯಯಿಸಿದ್ದಾರೆಂಬುದಕ್ಕೂ ಸಹ ಸೂಕ್ತ ಪುರಾವೆ ಒದಗಿಸಿಲ್ಲ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.