ಇಲ್ಲಿನ ಯಾಲೆ ಯೂನಿರ್ವಸಿಟಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಡಾ.ವಿಜೀಂದರ್ ಟೂರ್ ಎಂಬುವರನ್ನು ಚೀನಾ ಮೂಲದ ಮಾಜಿ ಸಹೋದ್ಯೋಗಿ ವೈದ್ಯನೊಬ್ಬ ಮನಬಂದಂತೆ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಬಂಧಿತ ಚೀನಾ ಮೂಲದ ಲಿಶಾನ್ ವಾಂಗ್ ಎಂದು ಗುರುತಿಸಲಾಗಿದ್ದು, ಆತನನ್ನು ನಂತರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಹಾಜರುಪಡಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2008ರಲ್ಲಿ ಲಿಶಾನ್ ಹಾಗೂ ವಿಜೇಂದರ್ ಬ್ರೂಕ್ಲೈನ್‌ನಲ್ಲಿನ ಕಿಂಗ್ಸ್‌ಬ್ರೂಕ್ ಜ್ಯೂವಿಶ್ ಮೆಡಿಕಲ್ ಸೆಂಟರ್‌ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ನಡೆದ ವೈಯಕ್ತಿಕ ನಿಂದನೆ, ಜಗಳವೇ ಕೊಲೆಗೆ ಕಾರಣವಾಗಿದೆ. ನಂತರ ಇಬ್ಬರೂ ಬೇರೆ, ಬೇರೆಯಾಗಿ ಕಾರ್ಯನಿರ್ವಹಿಸಲು ತೊಡಗಿದ್ದರು.
2006ರಲ್ಲಿ ಟೂರ್ ಮತ್ತು ಲಿಶಾನ್ ಕಿಂಗ್ಸ್‌ಬ್ರೂಕ್ಸ್ ಮೆಡಿಕಲ್ ರೆಸಿಡೆನ್ಸಿ ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಆದರೆ ಲಿಶಾನ್ ಎರಡು ವರ್ಷಗಳ ನಂತರ ಈ ತರಬೇತಿ ಪೂರ್ಣಗೊಳಿಸಿದ್ದ. ಆದರೆ ಈ ಸಂದರ್ಭದಲ್ಲಿ ಟೂರ್ ಹಾಗೂ ಮೆಡಿಕಲ್ ಸೆಂಟರ್ ಸಿಬ್ಬಂದಿಗಳು ತನ್ನನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆಂದು ಆರೋಪಿಸಿ ಜಗಳಕ್ಕೆ ಬಿದ್ದು, ಪ್ರಾಣ ಬೆದರಿಕೆ ಒಡ್ಡಿದ್ದ. ಈ ಘಟನೆ ನಂತರ ಲಿಶಾನ್ ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ.
ಒಟ್ಟಾರೆ ಹಳೇ ಭಿನ್ನಾಭಿಪ್ರಾಯವನ್ನೇ ಮುಂದಿಟ್ಟುಕೊಂಡು ಸೋಮವಾರ ಡಾ.ವಿಜೀಂದರ್ ಅವರ ಮನೆಯ ಎದುರೇ ಮನಬಂದಂತೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಸಂದರ್ಭದಲ್ಲಿ ವಿಜೀಂದರ್ ಅವರ ಗರ್ಭಿಣಿ ಪತ್ನಿಗೂ ಗುಂಡೇಟು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.