ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾತುಕತೆಗೆ ಸಿಂಗ್ ಸಿದ್ಧ, ಕಾಂಗ್ರೆಸ್‌ನದ್ದೇ ಸಮಸ್ಯೆ: ಪಾಕ್ (Shah Mahmood Qureshi | Manmohan Singh | Pakistan | Congress)
Bookmark and Share Feedback Print
 
ಭಾರತ ಸರಕಾರ ಮತ್ತು ಆಡಳಿತ ಪಕ್ಷದ ನಡುವೆ ಬಿರುಕು ಹುಟ್ಟಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ಉರುಳಿಸಿರುವ ಹೊಸ ದಾಳವಿದು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಆಸಕ್ತರಾಗಿದ್ದರೂ, ಕಾಂಗ್ರೆಸ್‌ನಲ್ಲಿನ ಕೆಲವು ಶಕ್ತಿಗಳು ಅವರನ್ನು ಬೆಂಬಲಿಸುತ್ತಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಅರ್ಥಪೂರ್ಣ ಮಾತುಕತೆ ನಿರಾಕರಿಸುತ್ತಿರುವ ಭಾರತದ ನಿಲುವನ್ನು ತೀವ್ರವಾಗಿ ಟೀಕಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, ಪಕ್ಕದ ರಾಷ್ಟ್ರದ ಹಠಮಾರಿತನವು ಅತಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಿದ್ದ ಅವರು, ಮುಂಬೈ ದಾಳಿಯ ಹಿಂದಿನ ಪಿತೂರಿದಾರರ ವಿರುದ್ಧ ಪಾಕಿಸ್ತಾನವು ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಮಾತುಕತೆಯೇ ಉಳಿದಿರುವ ವಿವೇಚನಾಯುತ ಮಾರ್ಗ. ಈ ಪ್ರಾಂತ್ಯದ ಇಬ್ಬರು ಪ್ರಧಾನ ಮಂತ್ರಿಗಳು, ಈ ಪ್ರಾಂತ್ಯದ ಎರಡು ಪ್ರಮುಖ ದೇಶಗಳು ಒಂದೆಡೆ ಕುಳಿತು, ದ್ವಿಪಕ್ಷೀಯ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬೇಕು ಎಂದು ಸಾರ್ಕ್ ಶೃಂಗಸಭೆಗಾಗಿ ಭೂತಾನ್‌ನಲ್ಲಿರುವ ಖುರೇಷಿ ತಿಳಿಸಿದ್ದಾರೆ.

ಪಾಕಿಸ್ತಾನವು ಮಾತುಕತೆಗೆ ಯಾವತ್ತೂ ಸಿದ್ಧವಿದೆ. ಆದರೆ ಭಾರತ ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೆ ಕಾರಣ ಅವರ ದೇಶೀಯ ರಾಜಕೀಯ ಅಂಶಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತುಕತೆ ಬಯಸುತ್ತಿದ್ದಾರೆ ಎಂಬುದು ನನಗೆ ಮನವರಿಕೆಯಾಗಿದೆ ಎಂದಿರುವ ಖುರೇಷಿ, ವೈಯಕ್ತಿಕವಾಗಿ ಅರ್ಥಪೂರ್ಣ ವ್ಯಕ್ತಿಯಾಗಿರುವ ಅವರಲ್ಲಿ ಒಂದು ದೃಷ್ಟಿಕೋನವಿದೆ, ಅವರು ಈ ಹಿಂದೆ ನಡೆದಿರುವುದನ್ನು ಮರೆಯಲು ಬಯಸುತ್ತಿದ್ದಾರೆ, ಅವರೊಬ್ಬ ಜ್ಞಾನಿ, ಅವರೊಬ್ಬ ಅರ್ಥಶಾಸ್ತ್ರಜ್ಞ. ಸಾರ್ಕ್ ಪ್ರಾಂತ್ಯದ ಎರಡು ಪ್ರಮುಖ ದೇಶಗಳ ನಡುವಿನ ಸಂಬಂಧಗಳು ಸಾಮಾನ್ಯ ಸ್ಥಿತಿಗೆ ಬಂದರೆ ಅದರಿಂದ ಈ ಪ್ರಾಂತ್ಯಕ್ಕೆ ಆಗಬಹುದಾದ ಲಾಭಗಳ ಕುರಿತು ಅವರಿಗೆ ಅರಿವಿದೆ. ಆದರೆ ಅದಕ್ಕಾಗಿ ಅಗತ್ಯವಿರುವ ಬೆಂಬಲವನ್ನು ಕಾಂಗ್ರೆಸ್‌ನೊಳಗಿನ ಕೆಲವು ಶಕ್ತಿಗಳು ನೀಡುತ್ತಿಲ್ಲ ಎಂದೆನಿಸುತ್ತಿದೆ ಎಂದಿದ್ದಾರೆ.

ಅದೇ ಹೊತ್ತಿಗೆ ತಾನು ಕಾಂಗ್ರೆಸ್‌ನ ಯಾರ ಕುರಿತು ಉಲ್ಲೇಖಿಸುತ್ತಿದ್ದೇನೆ ಎಂಬುದನ್ನು ಅವರು ಹೇಳಿಲ್ಲ. ಕಾಂಗ್ರೆಸ್‌ನ ಒಳಗಿನ ಕೆಲವು ವ್ಯಕ್ತಿಗಳು ಮಾತುಕತೆಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂದಷ್ಟೇ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ