ಕಳೆದ ತಿಂಗಳು ಎಂಟು ಶಾಲಾ ವಿದ್ಯಾರ್ಥಿಗಳನ್ನು ಚೂರಿಯಿಂದ ಇರಿದು ಹತ್ಯೆಗೈದ ಹಂತಕನನ್ನು ಚೀನಾ ಬುಧವಾರ ನೇಣುಗಂಬಕ್ಕೆ ಏರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
8 ಮಂದಿ ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ಕೊಂದ ಝಾಂಗ್ ಮಿನ್‌ಶೆಂಗ್ (41) ಎಂಬಾತನನ್ನು ಇಂದು ಬೆಳಿಗ್ಗೆ ಗಲ್ಲಿಗೇರಿಸಲಾಯಿತು. ಕಳೆದ ವರ್ಷ ಮಾರ್ಚ್ 23ರಂದು ಪೂರ್ವ ಪ್ರಾಂತ್ಯದ ಫುಜಿಯನ್ ಎಂಬಲ್ಲಿ ಎಂಟು ವಿದ್ಯಾರ್ಥಿಗಳು ತರಗತಿ ಮುಗಿಸಿ ಪೋಷಕರಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಈತ ದಾಳಿ ನಡೆಸಿ ಚೂರಿಯಿಂದ ಇರಿದು ಕೊಲೆಗೈದಿದ್ದ ಎಂದು ವರದಿ ವಿವರಿಸಿದೆ.
ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಎಂಟು ಮಕ್ಕಳು ಸಾವನ್ನಪ್ಪಿದ್ದರೆ, ಐದು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ನಂತರ ಪೊಲೀಸ್ ಅಧಿಕಾರಿಗಳು ಝಾಂಗ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಝಾಂಗ್ ವಿದ್ಯಾರ್ಥಿಗಳನ್ನು ಹತ್ಯೆಗೈದಿರುವ ಬಗ್ಗೆ ಒಪ್ಪಿಕೊಂಡಿದ್ದ. ಅಲ್ಲದೇ ನ್ಯಾಯಾಲಯ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಶಾಲೆಯ ಮೇಲೆ ಅಧಿಕ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ವೈಯಕ್ತಿಕ ದ್ವೇಷ ಅಥವಾ ಮಾನಸಿಕ ಅಸ್ವಸ್ಥತೆ ದಾಳಿಗೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.