ತನ್ನ 25 ವರ್ಷಗಳ ಅನುಭವದ ನಂತರವೂ 'ಸಾರ್ಕ್' ಅರ್ಧ ತುಂಬಿದ ಲೋಟವಾಗಿಯೇ ಮುಂದುವರಿದಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಬುಧವಾರ ಹೇಳಿದ್ದು, ದಕ್ಷಿಣ ಏಷಿಯಾ ಒಗ್ಗಟ್ಟಿನಿಂದ ಸಾಗದ ಹೊರತು 21ನೇ ಶತಮಾನ ನಮ್ಮದಾಗದು ಎಂದು ಒತ್ತಿ ಹೇಳಿದ್ದಾರೆ.
ಸಾರ್ಕ್ ನಡೆದು ಬಂದ ಎರಡೂವರೆ ದಶಕಗಳ ಹಿಂದೆ ನೋಡಿದರೆ, ನಮ್ಮ ಗ್ಲಾಸು ಅರ್ಧ ತುಂಬಿದೆ ಎಂದು ನಮ್ಮ ಬಗ್ಗೆ ನಾವೇ ಮೆಚ್ಚುಗೆಯ ಮಾತುಗಳನ್ನಾಡಬಹುದು ಅಥವಾ ಅರ್ಧ ಗ್ಲಾಸು ಇನ್ನೂ ಖಾಲಿ ಇದೆ ಎಂಬುದನ್ನು ಒಪ್ಪಿಕೊಳ್ಳಬಹುದು ಮತ್ತು ನಮಗೆ ನಾವೇ ಸವಾಲು ಹಾಕಬಹುದು ಎಂದು 16ನೇ ಪ್ರಾದೇಶಿಕ ಸಹಕಾರದ ದಕ್ಷಿಣ ಏಷಿಯಾ ರಾಷ್ಟ್ರಗಳ ಒಕ್ಕೂಟ (ಸಾರ್ಕ್) ಶೃಂಗಸಭೆಯನ್ನು ಉದ್ದೇಶಿಸಿ ಸಿಂಗ್ ನುಡಿದರು.
ಪ್ರಾದೇಶಿಕ ಸಹಕಾರ, ಪ್ರಾದೇಶಿಕ ಅಭಿವೃದ್ಧಿ ಮತ್ತು ಪ್ರಾದೇಶಿಕ ಸಮನ್ವಯತೆಯ ಗ್ಲಾಸು ಅರ್ಧ ಖಾಲಿಯಾಗಿದೆ ಎಂಬುದನ್ನು ಒಪ್ಪಿಕೊಂಡು ನಾವು ನಮಗೆ ಸ್ವತಃ ಸವಾಲು ಹಾಕಿಕೊಳ್ಳಬೇಕು ಎಂಬುದು ನನ್ನ ನಂಬಿಕೆಯಾಗಿದೆ. ಆದರೆ ಜಾಗತಿಕ ವ್ಯವಸ್ಥೆಯಲ್ಲಿ ಒಗ್ಗಟ್ಟಿನ ದನಿಯನ್ನು ತೋರಿಸಬೇಕಾದ ದಕ್ಷಿಣ ಏಷಿಯಾದಲ್ಲಿ ಅದು ಇಲ್ಲದೇ ಇರುವುದು ದುರದೃಷ್ಟಕರ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ದಕ್ಷಿಣ ಏಷಿಯಾವು ಒಟ್ಟಾಗಿ ಸಾಗದೇ ಇದ್ದರೆ ಖಂಡಿತಾ 21ನೇ ಶತಮಾನವು ಏಷಿಯನ್ನರ ಶತಮಾನವಾಗಿ ಬದಲಾಗದು ಎಂದೂ ಇದೇ ಸಂದರ್ಭದಲ್ಲಿ ಸಾರ್ಕ್ ರಾಷ್ಟ್ರಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಈ ಸಾರ್ಕ್ ಶೃಂಗಸಭೆ ಬುಧವಾರ ಅಪರಾಹ್ನ ಭೂತಾನ್‌ನ ರಾಜಧಾನಿ ತಿಂಫುವಿನಲ್ಲಿನ ತಾಶಿಚೋ ಜಾಂಗ್ ಕಾರ್ಯಾಲಯದ ಕಟ್ಟಡದಲ್ಲಿ ಆರಂಭವಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ದೀವ್ಸ್ ಮತ್ತು ಅಫಘಾನಿಸ್ತಾನಗಳು ಸಾರ್ಕ್ ಸದಸ್ಯ ರಾಷ್ಟ್ರಗಳು. ಇದರಲ್ಲಿ ವೀಕ್ಷಕ ರಾಷ್ಟ್ರಗಳಾಗಿ ಆಸ್ಟ್ರೇಲಿಯಾ, ಚೀನಾ, ಐರೋಪ್ಯ ಒಕ್ಕೂಟ, ಇರಾನ್, ಜಪಾನ್, ಮಾರಿಷಸ್, ಮಯನ್ಮಾರ್, ದಕ್ಷಿಣ ಕೊರಿಯಾ ಮತ್ತು ಅಮೆರಿಕಾಗಳು ಭಾಗವಹಿಸುತ್ತಿವೆ.