ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಕೈಗೆ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಸಿಕ್ಕಿದಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ಉಪಯೋಗಿಸುವ ಇಚ್ಛೆ ಹೊಂದಿರುವುದಾಗಿ ಮಾಜಿ ಅಂಗರಕ್ಷಕ ನಾಸ್ಸೆರ್ ಅಲ್ ಬಾಹರಿ ಅರಬ್ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾನೆ.
'ಒಸಾಮಾ ಪರಮಾಣ ಶಸ್ತ್ರಾಸ್ತ್ರದ ಮೂಲಕ ದಾಳಿ ನಡೆಸುವ ಕನಸನ್ನು ಹೊಂದಿದ್ದಾನೆ. ಆ ನಿಟ್ಟಿನಲ್ಲಿ ಒಂದು ವೇಳೆ ಒಸಾಮಾ ಕೈಗೆ ಪರಮಾಣು ಆಯುಧ ದೊರೆತಲ್ಲಿ, ಆತ ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಉಪಯೋಗಿಸುತ್ತಾನೆ ಎಂಬುದು' ತನ್ನ ಬಲವಾದ ನಂಬಿಕೆ ಎಂದು ಯೆಮೆನಿ ಅಂಗರಕ್ಷಕ ಲಂಡನ್ ಮೂಲದ ಅಲ್ ಖುದಾಸ್ ಅಲ್ ಅರಬಿಗೆ ತಿಳಿಸಿದ್ದಾನೆ.
ಆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಮೆರಿಕ ಕೂಡ ಗಂಭೀರ ಎಚ್ಚರಿಕೆಯನ್ನು ನೀಡಿತ್ತು. ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ನ್ಯೂಕ್ಲಿಯರ್ ಅಸ್ತ್ರ ಪಡೆಯುವ ಬಲವಾದ ಇಚ್ಛೆ ಹೊಂದಿದ್ದು, ನ್ಯೂಕ್ಲಿಯರ್ ಭಯೋತ್ಪಾದನೆ ಅತ್ಯಂತ ಗಂಭೀರವಾದದ್ದು ಎಂದು ಹೇಳಿತ್ತು.
ಅಲ್ ಖಾಯಿದಾ ಕಳೆದ 15 ವರ್ಷಗಳಿಂದ ನ್ಯೂಕ್ಲಿಯರ್ ಆಯುಧವನ್ನು ವಶಪಡಿಸಿಕೊಳ್ಳಲು ಸಾಕಷ್ಟು ಯತ್ನ ನಡೆಸಿತ್ತು. ಆದರೂ ಈಗಲೂ ಅಲ್ ಖಾಯಿದಾ ಸಾಕಷ್ಟು ಪ್ರಲಬ ಉಗ್ರಗಾಮಿ ಸಂಘಟನೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನೇತೃತ್ವದ ಭಯೋತ್ಪಾದನಾ ನಿಗ್ರಹ ಮತ್ತು ಹೋಮ್‌ಲ್ಯಾಂಡ್ ಭದ್ರತಾ ಸಲಹೆಗಾರ ಜಾನ್ ಬ್ರೆನ್ನಾನ್ ತಿಳಿಸಿದ್ದಾರೆ.