ಚೀನಾದಿಂದ ಪಾಕ್‌ನಲ್ಲಿ 2 ನ್ಯೂಕ್ಲಿಯರ್ ರಿಯಾಕ್ಟರ್ ನಿರ್ಮಾಣ
ಬೀಜಿಂಗ್, ಗುರುವಾರ, 29 ಏಪ್ರಿಲ್ 2010( 13:16 IST )
ಪಾಕಿಸ್ತಾನದಲ್ಲಿ ಎರಡು ನಾಗರಿಕ ಪರಮಾಣು ರಿಯಾಕ್ಟರ್ ನಿರ್ಮಿಸಲು ಚೀನಾ ಅಧಿಕೃತವಾಗಿ ಒಪ್ಪಿಗೆ ಸೂಚಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಚೀನಾ ಕಂಪನಿ ಪಂಜಾಬ್ ಪ್ರಾಂತ್ಯದ ಚಾಸ್ಮಾ ಪ್ರದೇಶದಲ್ಲಿ ಎರಡು ನೂತನವಾದ 650 ಮೆಗಾ ವ್ಯಾಟ್ ಸಾಮರ್ಥ್ಯದ ನಾಗರಿಕ ಪರಮಾಣು ರಿಯಾಕ್ಟರ್ ನಿರ್ಮಿಸಲು ಮುಂದಾಗಿರುವುದಾಗಿ ಮಾಧ್ಯಮ ವರದಿ ವಿವರಿಸಿದೆ.
ಚಾಸ್ಮಾ ಪ್ರದೇಶದಲ್ಲಿ ಚೀನಾ 1991ರಲ್ಲಿಯೇ ರಿಯಾಕ್ಟರ್ ಬಿಲ್ಡಿಂಗ್ ಅನ್ನು ಪ್ರಾರಂಭಿಸಿತ್ತು. ಅಲ್ಲದೇ ಎರಡನೇ ರಿಯಾಕ್ಟರ್‌ಗಾಗಿ 2005ರಲ್ಲಿ ಬಿಲ್ಡಿಂಗ್ ಪ್ರಾರಂಭಿಸಿದ್ದು, ಈ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಚೈನಾ ನ್ಯಾಷನಲ್ ನ್ಯೂಕ್ಲಿಯರ್ ಕಾರ್ಪೊರೇಷನ್ ಮಾರ್ಚ್ 1 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಣಾ ವರದಿ ಹಾಕಿತ್ತು.
ಅಲ್ಲದೇ ಚಾಸ್ಮಾದಲ್ಲಿ ರಿಯಾಕ್ಟರ್ ನಿರ್ಮಾಣಕ್ಕಾಗಿ ಹಣಾಕಾಸು ನೆರವಿಗೆ ಎರಡು ರಾಷ್ಟ್ರಗಳ ನಡುವೆ ಫೆಬ್ರುವರಿ ತಿಂಗಳಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.
ಆದರೆ ಪಾಕಿಸ್ತಾನದಲ್ಲಿ ಎರಡು ನ್ಯೂಕ್ಲಿಯರ್ ರಿಯಾಕ್ಟರ್ ಸ್ಥಾಪಿಸಲು ಉಭಯ ದೇಶಗಳ ನಡುವೆ ನಡೆದ ಮಾತುಕತೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ನ್ಯೂಕ್ಲಿಯರ್ ಕಾರ್ಪೊರೇಷನ್ ವಕ್ತಾರೆಯೊಬ್ಬರು ಸ್ಪಷ್ಟಪಡಿಸಿದ್ದಾರೆ.