'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್ ನೇಣಿಗೆ ಹಾಕಿ'
ಮುಂಬೈ, ಗುರುವಾರ, 29 ಏಪ್ರಿಲ್ 2010( 14:42 IST )
ಮುಂಬೈ ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ 50 ಹರೆಯದ ಜಮುನಾ ವಾಘೇಲಾ ಎಂಬ ತಾಯಿಯ ಕೂಗಿದು. ತನ್ನ ಮಗನನ್ನು ಬಲಿತೆಗೆದುಕೊಂಡಿದ್ದ ಆ ಕರಾಳ ರಾತ್ರಿಯನ್ನು ನೆನಪಿಸಿಕೊಂಡಿರುವ ಅವರು, ಆಗಷ್ಟೇ ಅಜ್ಮಲ್ ಕಸಬ್‌ಗೆ ನೀರು ಕೊಟ್ಟಿದ್ದ ತನ್ನ ಮಗನನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದಿದ್ದ ಪಾಕ್ ಉಗ್ರನಿಗೆ ಗಲ್ಲು ಶಿಕ್ಷೆ ನೀಡಲು ತಡ ಯಾಕೆ ಎಂದು ಆಕೆ ಪ್ರಶ್ನಿಸಿದ್ದಾರೆ.
ಯಾಕಾಗಿ ಕಸಬ್‌ನನ್ನು ಜೀವಂತವಾಗಿ ಇಟ್ಟುಕೊಳ್ಳಲಾಗುತ್ತಿದೆ? ಆತನ ಮೇಲೆ ಕರುಣೆ ತೋರಲೇ ಬಾರದು. ಆದಷ್ಟು ಬೇಗನೇ ಗಲ್ಲಿಗೇರಿಸಬೇಕು ಎಂದು ಕೋಪದಿಂದ ಹೇಳಿದ್ದಾರೆ.
ನನ್ನ ಮಗನನ್ನು ಕೊಂದು ಆತ ಗಳಿಸಿದ್ದಾದರೂ ಏನು? ಉಗ್ರಗಾಮಿಗಳು ಇದನ್ನೆಲ್ಲಾ ಯಾಕಾಗಿ ಮಾಡುತ್ತಿದ್ದಾರೆ? ಕೇವಲ ಒಂದು ಗ್ಲಾಸ್ ನೀರನ್ನು ಕೊಟ್ಟದ್ದಕ್ಕೆ ನನ್ನ ಮಗನನ್ನು ಕೊಂದರೇ ಎಂದು ಜಮುನಾ ಖಿನ್ನರಾಗಿ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಡುತ್ತಾರೆ.
ದಕ್ಷಿಣ ಮುಂಬೈಯ ಸರಕಾರಿ ಜಿ.ಟಿ. ಆಸ್ಪತ್ರೆಯಲ್ಲಿ ಜಾಡಮಾಲಿ ಕೆಲಸ ಮಾಡುತ್ತಿರುವ ಜಮುನಾ ಮಗ ಠಾಕೂರ್ ವಾಘೇಲಾ (32)ನನ್ನು ಕಾಮಾ ಆಸ್ಪತ್ರೆ ಸಮೀಪದ ತನ್ನ ಮನೆಯ ಪಕ್ಕ ಉಗ್ರ ಕಸಬ್ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದ ಎಂದು ಪೊಲೀಸರು ಹೇಳುತ್ತಾರೆ.
2008 ನವೆಂಬರ್ 26ರಂದು ಸಮುದ್ರ ಮಾರ್ಗವಾಗಿ ಮುಂಬೈಗೆ ನುಸುಳಿದ್ದ ಕಸಬ್, ಅಬು ಇಸ್ಮಾಯಿಲ್ ಸೇರಿದಂತೆ ಹತ್ತು ಮಂದಿ ಉಗ್ರರು ತಾಜ್ ಮಹಲ್ ಹೋಟೆಲ್, ನಾರಿಮನ್ ಹೌಸ್, ಒಬೆರಾಯ್ ಹೋಟೆಲ್ ಮತ್ತು ಸಿಎಸ್‌ಟಿ ಟರ್ಮಿನಸ್‌ನಲ್ಲಿ ಗುಂಡಿನ ದಾಳಿ ನಡೆಸಿ ಸುಮಾರು 166 ಮಂದಿ ಅಮಾಯಕರನ್ನು ಕೊಂದು ಹಾಕಿದ್ದರು.
ಕಾಮಾ ಆಸ್ಪತ್ರೆಯೊಳಗೆ ಭದ್ರತಾ ಸಿಬ್ಬಂದಿಗಳೊಂದಿಗೆ ಗುಂಡಿನ ಚಕಮಕಿ ನಡೆಸುವ ಮೊದಲು ಉಗ್ರ ಕಸಬ್, ಠಾಕೂರ್‌ನನ್ನು ಗಂಭೀರವಾಗಿ ಗಾಯಗೊಳಿಸಿದ್ದ. ನಂತರ ಆಸ್ಪತ್ರೆಯ ಹೊರಗಡೆ ಎ.ಟಿ.ಎಸ್. ಮುಖ್ಯಸ್ಥ ಹೇಮಂತ್ ಕರ್ಕರೆ, ಡಿಐಜಿ ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್‌ರನ್ನು ಗುಂಡಿಕ್ಕಿ ಕೊಂದಿದ್ದನು.
ಅಂದು ರಾತ್ರಿ ನಡೆದಿದ್ದ ಘಟನೆಯನ್ನು ಠಾಕೂರ್ ತಾಯಿ ಜಮುನಾ ವಿವರಿಸುವುದು ಹೀಗೆ.
'ರಾತ್ರಿ 10 ಗಂಟೆಯ ವೇಳೆಗೆ ನಾನು ಮನೆಯ ಹೊರಗಡೆ ನಿಂತಿದ್ದೆ. ನನ್ನ ಮಗ ಮತ್ತು ಮೊಮ್ಮಗ ಊಟ ಮಾಡುತ್ತಿದ್ದರು. ಈ ಹಂತದಲ್ಲಿ ವೇಗವಾಗಿ ಓಡಿ ಬಂದ ಇಬ್ಬರು (ಕಸಬ್ ಮತ್ತು ಇಸ್ಮಾಯಿಲ್) ನನ್ನ ಮನೆಯ ಬಳಿ ನಿಂತಾಗ, ಏನು ಬೇಕೆಂದು ಅವರಲ್ಲಿ ಪ್ರಶ್ನಿಸಿದ್ದೆ' ಎಂದು ತಿಳಿಸಿದ್ದಾರೆ.
'ತಕ್ಷಣ ಕಸಬ್ ಸಹಚರ ನನ್ನ ಮೇಲೆ ಗುಂಡಿನ ದಾಳಿ ಮಾಡಿದ. ಆದರೆ ಅದೃಷ್ಟವಶಾತ್ ನಾನು ಪಾರಾಗಿ ಅಲ್ಲೇ ಪಕ್ಕದಲ್ಲಿ ಅಡಗಿ ಕುಳಿತೆ. ಆಗ ಕಸಬ್ ನನ್ನ ಮಗನಲ್ಲಿ ನೀರು ಬೇಕೆಂದು ಕೇಳಿದ. ಈ ಹೊತ್ತಿಗೆ ನಡುಗುವ ಕೈಗಳಿಂದ ಕಸಬ್‌ಗೆ ನನ್ನ ಮಗ ನೀರು ಕೊಟ್ಟ. ನೀರು ಕುಡಿದ ತಕ್ಷಣ ಆತ ಮಗನ ಮೇಲೆ ಗುಂಡು ಹಾರಿಸಿಯೇ ಬಿಟ್ಟ' ಎಂದು ಜಮುನಾ ವಿವರಿಸಿದ್ದಾರೆ.
ದೇವರು ನನ್ನ ಮೇಲೆ ಸ್ವಲ್ಪ ಕರುಣೆ ತೋರಿದ್ದಾರೆ. ಅಲ್ಲದೆ ಕಸಬ್ ನನ್ನ ಮೊಮ್ಮಗನನ್ನು ಕಂಡಿರಲಿಲ್ಲ. ಆದ್ದರಿಂದ ಆತ ಪಾರಾದ ಎಂದವರು ಹೇಳಿದರು. ಜಮುನಾ ಅವರ ಪತಿ ಬುಧಾಯ್ (60) ಕೂಡಾ ಜಿ.ಟಿ. ಆಸ್ಪತ್ರೆಯಲ್ಲಿ ಜಾಡಮಾಲಿ ಮಾಡುತ್ತಿದ್ದಾರೆ.
ಇಡೀ ರಾತ್ರಿ ಮಗನ ಸಾವಿನ ಬಗ್ಗೆ ನನಗೆ ತಿಳಿದಿರಲಿಲ್ಲ. ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದಷ್ಟೇ ಹೇಳಿದ್ದರು. ಆದರೆ ಮುಂಜಾವಿನಲ್ಲಿ ಆಸ್ಪತ್ರೆಗೆ ತೆರಳಿದಾಗಲೇ ಮಗನ ಸಾವಿನ ವಿಚಾರ ತಿಳಿಯಿತು ಎಂದವರು ಹೇಳಿದರು.