ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 50 ನಿಮಿಷ ಮಾತುಕತೆ ನಡೆಸಿದ ಪ್ರಧಾನಿ ಸಿಂಗ್-ಗಿಲಾನಿ (Manmohan Singh | Yousuf Raza Gilani | Pakistan | SAARC)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಯೂಸುಫ್ ರಾಜಾ ಗಿಲಾನಿ ಸಾರ್ಕ್ ಶೃಂಗಸಭೆಯ ನಡುವೆ ಉಭಯ ದೇಶಗಳ ಸ್ಥಗಿತಗೊಂಡಿರುವ ಮಾತುಕತೆಗೆ ಪುನಶ್ಚೇತನ ನೀಡುವುದು ಮತ್ತು ಸಂಬಂಧಗಳನ್ನು ಪುನರ್ ಜೋಡಣೆಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಭೇಟಿಯಾಗಿ 50 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

16ನೇ ಸಾರ್ಕ್ ಶೃಂಗಸಭೆಗಾಗಿ ಭೂತಾನ್‌ನಲ್ಲಿರುವ ದಕ್ಷಿಣ ಏಷಿಯಾ ದೇಶಗಳ ಮುಖ್ಯಸ್ಥರಿಗಾಗಿ ಸಿದ್ಧಪಡಿಸಲಾಗಿರುವ ಸಾರ್ಕ್ ಗ್ರಾಮದಲ್ಲಿನ ಭೂತಾನ್ ಹೌಸ್‌ನಲ್ಲಿ ಇಬ್ಬರು ಪ್ರಧಾನಿಗಳು ಇಂದು ಮಾತುಕತೆ ನಡೆಸಿದರು.

ಮನಮೋಹನ್ ಸಿಂಗ್ ಮತ್ತು ಗಿಲಾನಿ ಪರಸ್ಪರ ಹಸ್ತಲಾಘವ ನೀಡಿ ಫೋಟೋಗೆ ಪೋಸ್ ನೀಡಿದ್ದು, ಕಳೆದ ವರ್ಷದ ಜುಲೈ ತಿಂಗಳಲ್ಲಿ ಈಜಿಪ್ಟ್‌ನ ಶರ್ಮ್-ಎಲ್-ಶೇಖ್‌ನಲ್ಲಿ ನಡೆದಿದ್ದ ಮೊದಲ ವಿವಾದಿತ ಮಾತುಕತೆಯ ನಂತರದ ತಮ್ಮ 50 ನಿಮಿಷಗಳ ಮಾತುಕತೆಗಾಗಿ ಒಳ ನಡೆದರು.

ಈ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ಅವರು ಮುಂಬೈ ಭಯೋತ್ಪಾದನಾ ದಾಳಿಯ ಪಿತೂರಿದಾರರ ವಿರುದ್ಧ ಇಸ್ಲಾಮಾಬಾದ್ ಕಠಿಣ ಕ್ರಮಗಳನ್ನು ಇನ್ನೂ ಕೈಗೊಂಡಿಲ್ಲ ಎಂಬ ಭಾರತದ ತೀವ್ರ ಅಸಮಾಧಾನವನ್ನು ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.

2008ರ ಮುಂಬೈ ದಾಳಿಯ ನಂತರ ಆ ದೇಶದ ಜತೆಗಿನ ಸಮಗ್ರ ಮಾತುಕತೆಯನ್ನು ಅಮಾನತುಗೊಳಿಸಿರುವ ಭಾರತ, ಮಾತುಕತೆ ಪುನರಾರಂಭಕ್ಕೆ ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕೆಂಬ ನಿಬಂಧನೆ ವಿಧಿಸಿದೆ.

ಮಾತುಕತೆಯಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಶಕ್ತಿಗಳ ವಿರುದ್ಧ ಪಾಕಿಸ್ತಾನ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳು, ಗಡಿಯಾಚೆ ನಡೆಯುತ್ತಿರುವ ಭಯೋತ್ಪಾದನಾ ಸಂಚುಗಳು, ಗಡಿ ಪ್ರದೇಶದ ಒಳನುಸುಳುವಿಕೆ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದ ಹೊಂದಾಣಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹಾಗೂ ಅತ್ತ ಪಾಕ್ ನಿಯೋಗದಲ್ಲಿ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಮತ್ತಿತರರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ