ಅಮೆರಿಕನ್ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ವೆನಿಜುವೆಲಾದ ಬೋಲಿವರ್ ರಾಜ್ಯದಲ್ಲಿ ಚೂರಿಯಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ವಾಷಿಂಗ್ಟನ್‌ನ ಎಸ್ಟೆಬಾನ್ ವುಡ್ಸ್ (68) ಅವರು ಕಳೆದ ಎಂಟು ವರ್ಷಗಳಿಂದ ವೆನೆಜುವೆಲಾದ ಚರ್ಚ್‌ವೊಂದರಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಪ್ಯುರ್ಟೋ ಓರ್ಡಾಜ್ ಹೋಲಿ ಫ್ಯಾಮಿಲಿ ಚರ್ಚ್‌ನ ಪಾಸ್ಟರ್ ಕೂಡ ಆಗಿದ್ದರು ಎಂದು ವೆನೆಜುವೆಲಾದ ಅಟಾರ್ನಿ ಜನರಲ್ಸ್ ಕಚೇರಿ ಮೂಲ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅವರ ಕೋಣೆಯಲ್ಲಿ ಪಾದ್ರಿಯ ಕೈಕಾಲು ಕಟ್ಟಿ, ಬಾಯಿ ಮುಚ್ಚಿ, ಚೂರಿಯಿಂದ ಇರಿದು ಕೊಂದಿರುವುದನ್ನು ನಾವು ಪತ್ತೆ ಹಚ್ಚಿರುವುದಾಗಿ ಕೋರೋಮೋಟೋ ಚರ್ಚ್ ಪಾಸ್ಟರ್ ಮಿಗ್ಯುಯೆಲ್ ಆಂಗೆಲ್ ಗಾರ್ಸಿಯಾ ಅವರು ತಿಳಿಸಿರುವುದಾಗಿ ಯೂನಿಯನ್ ರೇಡಿಯೋ ಗುರುವಾರ ವರದಿಯಲ್ಲಿ ವಿವರಿಸಿದೆ.
ವುಡ್ಸ್ ಅವರು ಸುಮಾರು 23 ವರ್ಷಗಳಿಂದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಅವರು ವೆನಿಜುವೆಲಾದಲ್ಲಿಯೂ ಪಾದ್ರಿ, ವಿಕಾರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪಾದ್ರಿಯನ್ನು ಯಾಕಾಗಿ ಮತ್ತು ಯಾರು ಹತ್ಯೆಗೈದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.