ಕೊನೆಗೂ ಅಮೆರಿಕ ಒಪ್ಪಿಗೆ:ಹೆಡ್ಲಿ ವಿಚಾರಣೆಗೆ ಭಾರತಕ್ಕೆ ಅವಕಾಶ
ಅಮೆರಿಕ ಏಜೆಂಟ್ ಆಗಿದ್ದ ಹೆಡ್ಲಿ....
ವಾಷಿಂಗ್ಟನ್, ಶನಿವಾರ, 1 ಮೇ 2010( 11:28 IST )
ವಾಣಿಜ್ಯ ನಗರಿ ಮುಂಬೈ ದಾಳಿ ರೂವಾರಿ ಲಷ್ಕರ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕದ ಗುಪ್ತಚರ ಇಲಾಖೆಯ ಏಜೆಂಟ್ ಆಗಿದ್ದ ಎಂಬುದನ್ನು ಆತನ ಕುಟುಂಬವೇ ಖಚಿತಪಡಿಸಿದೆ.
ಲಷ್ಕರ್ ಉಗ್ರ ಹೆಡ್ಲಿಯ ಸಂಬಂಧಿ ವೀಲಿಯಂ ಹೆಡ್ಲಿ ಈ ಮಾಹಿತಿ ನೀಡಿದ್ದು, ಡೇವಿಡ್ ಹೆಡ್ಲಿ ಯಾವತ್ತೂ ಅಮೆರಿಕದ ವಿರುದ್ಧವಾಗಿ ಕೆಲಸ ಮಾಡಿರಲಿಲ್ಲ. ಆದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾದ ಆತನಿಗೆ ಕಡಿಮೆ ಶಿಕ್ಷೆ ವಿಧಿಸಲಾಗಿತ್ತು. ನಂತರ ಅಮೆರಿಕದ ಪರ ಬೇಹುಗಾರಿಕೆ ಮಾಡುವುದನ್ನು ನಿಲ್ಲಿಸಿದ್ದ ಎಂದು ವಿವರಿಸಿದ್ದಾನೆ.
ಹೆಡ್ಲಿ ವಿಚಾರಣೆಗೆ ಭಾರತಕ್ಕೆ ಮುಕ್ತ ಅವಕಾಶ-ಅಮೆರಿಕ: ಉಗ್ರ ಹೆಡ್ಲಿ ಅಮೆರಿಕದ ಗುಪ್ತಚರ ಇಲಾಖೆ ಏಜೆಂಟ್ ಆಗಿದ್ದ ಎಂಬ ವಿಷಯ ಬಹಿರಂಗವಾದ ನಂತರವೂ ಮಹತ್ವದ ಬೆಳವಣಿಗೆ ಎಂಬಂತೆ ಮುಂಬೈ ದಾಳಿಯ ರೂವಾರಿಯಾದ ಹೆಡ್ಲಿಯನ್ನು ಭಾರತ ವಿಚಾರಣೆಗೆ ಒಳಪಡಿಸಲು ಅಮೆರಿಕ ಶನಿವಾರ ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಎಫ್‌ಬಿಐ ಅಧಿಕಾರಿಗಳ ಕಸ್ಟಡಿಯಲ್ಲಿರುವ ಡೇವಿಡ್ ಕೋಲ್‌ಮನ್ ಹೆಡ್ಲಿಯನ್ನು ಯಾವುದೇ ಪೂರ್ವಷರತ್ತು ಇಲ್ಲದೆ ವಿಚಾರಣೆಗೆ ಗುರಿಪಡಿಸುವ ಅವಕಾಶವನ್ನು ಅಮೆರಿಕ ಭಾರತಕ್ಕೆ ನೀಡಿದೆ. ಆ ನಿಟ್ಟಿನಲ್ಲಿ ಹೆಡ್ಲಿಯನ್ನು ವಿಚಾರಣೆಗೊಳಪಡಿಸಲು ಭಾರತ ಸರ್ಕಾರ ಶೀಘ್ರವೇ ವಿಶೇಷ ತಂಡವೊಂದನ್ನು ರಚಿಸಲಿದೆ ಎಂದು ಹೇಳಿದೆ.
ಹೆಡ್ಲಿಯನ್ನು ನೇರವಾಗಿ ವಿಚಾರಣೆಗೆ ಒಳಪಡಿಸಲು ಅಮೆರಿಕ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಪ್ರಕರಣದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.