ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಬಲಿ ತೆಗೆದುಕೊಂಡ ಆತ್ಮಹತ್ಯಾ ದಾಳಿಕೋರ ಸಂಚಿನಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಮನೆಯಲ್ಲಿ ಠಿಕಾಣಿ ಹೂಡಿದ್ದ ಎಂಬ ಅಂಶ ಇದೀಗ ಬಯಲಾಗಿದೆ.
ಈ ಆತ್ಮಹತ್ಯಾ ದಾಳಿಕೋರ ಮತ್ತೊಬ್ಬ ಶಂಕಿತ ಆರೋಪಿ ರಾವಲ್ಪಿಂಡಿಯ ಹಸ್‌ನೈನ್ ಗುಲ್ ಎಂಬಾತನ ಮನೆಯಲ್ಲಿ ತಂಗಿದ್ದ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಸದಸ್ಯರು ಹೇಳಿದ್ದಾರೆ.
ಸ್ಫೋಟ ಸ್ಥಳದಲ್ಲಿ ಸಂಗ್ರಹಿಸಿದ್ದ ಆತ್ಮಹತ್ಯಾ ದಾಳಿಕೋರನ ಡಿಎನ್‌ಎ ಮತ್ತು ಗುಲ್‌ನ ಮನೆಯಲ್ಲಿ ದೊರೆತಿದ್ದ ಶೂಗಳಿಗೆ ಅಂಟಿಕೊಂಡಿದ್ದ ರಕ್ತದ ಡಿಎನ್‌ಎ ಪರೀಕ್ಷೆಗಳನ್ನು ಮಾಡಿ, ಹೋಲಿಕೆ ಮಾಡಿದಾಗ ಎರಡಲ್ಲೂ ಸಂಪೂರ್ಣ ಸಾಮ್ಯತೆ ಇದ್ದಿರುವುದು ಕಂಡು ಬಂದಿತ್ತು ಎಂದು ತಿಳಿಸಿದ್ದಾರೆ.
ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣವನ್ನು ವಿಶ್ವಸಂಸ್ಥೆಯ ಆಯೋಗ ತನಿಖೆ ನಡೆಸುತ್ತಿದ್ದು, ಶೀಘ್ರವೇ ವರದಿಯನ್ನು ಸಲ್ಲಿಸುವುದಾಗಿ ಹೇಳಿದೆ. ಆದರೂ ಭುಟ್ಟೋ ಪ್ರಕರಣ ಸಾಕಷ್ಟು ತಿರುವು ಪಡೆಯುತ್ತಾ ಸಾಗಿದೆ.