ಆಸ್ಟ್ರೇಲಿಯಾದಲ್ಲಿ ಮತ್ತೆ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದು ಜನಾಂಗೀಯ ದ್ವೇಷ ಪ್ರೇರಿತ ಹಲ್ಲೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಸಿಡ್ನಿಯಲ್ಲಿ ಏಪ್ರಿಲ್ 28ರಂದು 24ರ ಹರೆಯದ ಭಾರತೀಯ ವಿದ್ಯಾರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಹಲ್ಲೆಗೊಳಗಾದ ವಿದ್ಯಾರ್ಥಿಯ ಗುರುತು ತಿಳಿಸದೆ ವರದಿಯಲ್ಲಿ ವಿವರಿಸಿದೆ.
ಈ ವಿದ್ಯಾರ್ಥಿಯನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ್ದು, ಇದೊಂದು ಜನಾಂಗೀಯ ದ್ವೇಷದ ದಾಳಿ ಅಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. ವಿದ್ಯಾರ್ಥಿ ಸಿಡ್ನಿಯ ವೆಸ್ಟ್‌ಮೇಡ್ ಅಮೋಸ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮೂರು ಮಂದಿ ಮಾರಣಾಂತಿಕವಾಗಿ ದಾಳಿ ಮಾಡಿತ್ತು. ವಿದ್ಯಾರ್ಥಿ ನೆಲಕ್ಕುರುಳಿ ಬಿದ್ದಾಗಲೂ ಮೂರು ಮಂದಿ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದರು, ಈ ಸಂದರ್ಭದಲ್ಲಿ ಆತ ಜೀವ ರಕ್ಷಣೆಗಾಗಿ ಬೊಬ್ಬೆ ಹೊಡೆಯುತ್ತಿದ್ದನ್ನು ಕೇಳಿ ದಾರಿಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿ ನಿಲ್ಲಿಸಿ ಆತನ ಸಹಾಯಕ್ಕೆ ಬಂದಾಗಲೇ ಆ ದಾಳಿಕೋರರು ಪರಾರಿಯಾಗಿದ್ದರು.
ಇದೊಂದು ಜನಾಂಗೀಯ ದ್ವೇಷದ ದಾಳಿ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಕ್ರೈಂ ಬ್ರಾಂಚ್ ಪೊಲೀಸ್ ಆಡಂ ಫಿಲಿಪ್ಸ್ ತಿಳಿಸಿದ್ದಾರೆ. ಈ ಪ್ರದೇಶದ ರೈಲ್ವೆ ಸ್ಟೇಶನ್ ಸುತ್ತಮುತ್ತ ಜನರನ್ನು ದರೋಡೆ ಮಾಡಲು ಯಾವತ್ತೂ ಇಂತಹ ದಾಳಿಗಳು ನಡೆಯುತ್ತಿರುತ್ತದೆ. ಆ ನಿಟ್ಟಿನಲ್ಲಿ ಇದು ಕೂಡ ದರೋಡೆ ಉದ್ದೇಶದಿಂದಲೇ ಈ ದಾಳಿ ನಡೆದಿರಬೇಕೆಂದು ತಿಳಿಸಿದ್ದಾರೆ.