ಅಮೆರಿಕಾದ ನ್ಯೂಯಾರ್ಕ್ ನಗರದದಲ್ಲಿ 'ಟೈಮ್ಸ್ ಸ್ಕ್ವೇರ್' ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಬಾಂಬ್ ಇರುವುದನ್ನು ಬೀದಿ ವ್ಯಾಪಾರಿಯೊಬ್ಬ ಪೊಲೀಸರಿಗೆ ತಿಳಿಸಿದ ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಭಾರೀ ಅನಾಹುತ ತಪ್ಪಿ ಹೋಗಿದೆ.
ಹೈಡ್ರೋಕಾರ್ಬನ್ ಗ್ಯಾಸ್‌ನ ಮೂರು ಟ್ಯಾಂಕ್‌ಗಳು, ಗ್ರಾಹಕರ ಮಟ್ಟದ ಸ್ಫೋಟಕ ವಸ್ತುಗಳು, ಎರಡು ತುಂಬಿದ ಐದು ಗ್ಯಾಲನ್ ಸಾಮರ್ಥ್ಯದ ಗ್ಯಾಸೊಲಿನ್ ಕಂಟೈನರುಗಳು, ಎರಡು ಗಡಿಯಾರಗಳು, ಬ್ಯಾಟರಿಗಳು, ವಿದ್ಯುತ್ ವೈರುಗಳು ಮತ್ತು ಇತರ ವಸ್ತುಗಳನ್ನು ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ನ್ಯೂಯಾರ್ಕ್ ನಗರ ಪೊಲೀಸ್ ಆಯುಕ್ತ ರೇಮಂಡ್ ಕೆಲ್ಲಿ ತಿಳಿಸಿದ್ದಾರೆ.
ಇದು ಭಯೋತ್ಪಾದಕರ ಕೃತ್ಯ ಎಂದು ನ್ಯೂಯಾರ್ಕ್ ಗವರ್ನರ್ ಡೇವಿಡ್ ಪಾಟರ್ಸನ್ ಹೇಳಿದ್ದಾರೆ. ಆದರೆ ಇದನ್ನು ಯಾಕಾಗಿ ಮಾಡಿದ್ದಾರೆ ಮತ್ತು ಯಾರು ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ತನಿಖೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಹೈಡ್ರೋಕಾರ್ಬನ್ ಗ್ಯಾಸ್‌ನಿಂದ ತಯಾರಿಸಲ್ಪಟ್ಟಿದ್ದ ವಿಫಲ ಬಾಂಬ್, ಗ್ಯಾಸೊಲಿನ್ ಮತ್ತು ಇತರ ಸ್ಫೋಟಕಗಳು ಕಾರಿನಲ್ಲಿ ಪತ್ತೆಯಾಗಿವೆ. ಬಹುಶ ಜನರನ್ನು ದಿಗಿಲುಗೊಳಿಸಲು ಸೃಷ್ಟಿಸಿದ ತಂತ್ರವಾಗಿರಬಹುದು ಎಂದೂ ಹೇಳಲಾಗುತ್ತಿದೆ.
ನಿಜಕ್ಕೂ ನಾವು ಅದೃಷ್ಟಶಾಲಿಗಳು. ನ್ಯೂಯಾರ್ಕ್ ಜನತೆ ಮತ್ತು ಶ್ರೇಷ್ಠ ಕಾರ್ಯಕ್ಷಮತೆಯ ಪೊಲೀಸ್ ಅಧಿಕಾರಿಗಳಿಗೆ ಕೃತಜ್ಞತೆಗಳು. ಅವರಿಂದಾಗಿ ಭಾರೀ ಅನಾಹುತವೊಂದು ಇಂದು ತಪ್ಪಿ ಹೋಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.
ಟೈಮ್ಸ್ ಸ್ಕ್ವೇರ್‌ನಲ್ಲಿ ಅನುಮಾನಾಸ್ಪದವಾಗಿ ವಾಹನವೊಂದನ್ನು ಪಾರ್ಕ್ ಮಾಡಲಾಗಿದೆ ಎಂದು ಟಿ-ಶರ್ಟ್ ವ್ಯಾಪಾರಿಯೊಬ್ಬ ನ್ಯೂಯಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಆ ಕಾರಿನ ಹಿಂದುಗಡೆಯಿಂದ ಸುಟ್ಟ ವಾಸನೆ ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದ್ದ ಆತ ಸಮಯೋಚಿತ ಕ್ರಮಕ್ಕೆ ಮುಂದಾಗಿದ್ದರಿಂದಾಗಿ ಅನಾಹುತ ತಪ್ಪಿ ಹೋಗಿದೆ.