ಮಾವೋವಾದಿಗಳ ತೀವ್ರ ವಿರೋಧದಿಂದಾಗಿ ನೇಪಾಳದಲ್ಲಿ ಮತ್ತೆ ಸಂವಿಧಾನ ಬಿಕ್ಕಟ್ಟು ತಲೆದೋರಿದೆ. ಪ್ರಧಾನಿ ಮಾಧವ ಕುಮಾರ್ ನೇಪಾಳ್ ಅವರು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮಾಜಿ ಮಾವೋವಾದಿ ಗೆರಿಲ್ಲಾಗಳು ಭಾನುವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಭಾನುವಾರ ಚಾಲನೆ ನೀಡಿದ್ದು, ಹಲವಡೆ ಹಿಂಸಾಚಾರ ನಡೆದಿದ್ದು, ಬಂದ್ ಶಾಂತಿಯುತವಾಗಿ ನಡೆಯಿತು.
ಇದಕ್ಕೂ ಮುನ್ನ ದಿನ ಕಾಠ್ಮಂಡು ಮತ್ತು ಇತರ ಪ್ರಮುಖ ನಗರಗಳಲ್ಲಿ ಕೆಂಪು ಬಾವುಟಗಳನ್ನು ಹಿಡಿದ ಮಾವೋವಾದಿ ಕಾರ್ಯಕರ್ತರು ಭಾರೀ ಪ್ರಮಾಣದ ರಾಲಿಗಳನ್ನು ಹಮ್ಮಿಕೊಂಡಿದ್ದರು. ಭಾನುವಾರ ಕೂಡ ಸಾವಿರಾರು ಕಾರ್ಯಕರ್ತರು ಸಾರಿಗೆ ಸಂಚಾರವನ್ನು ನಿರ್ಬಂಧಿಸಿ, ಅಂಗಡಿ, ಮಾರುಕಟ್ಟೆ,ಕಾರ್ಖಾನೆ, ಶಾಲೆಗಳನ್ನು ಮುಚ್ಚಿಸಿ ಪ್ರತಿಭಟನೆ ನಡೆಸಿದರು.
ಮುಷ್ಕರದಿಂದಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಮಾಜಿ ಮಾವೋವಾದಿ ಮಂತ್ರಿಗಳು, ಸಂಸದರು ಹಾಗೂ ಪ್ರಮುಖ ಮುಖಂಡರ ನೇತೃತ್ವದಲ್ಲಿ ಈ ರಾಷ್ಟ್ರವ್ಯಾಪಿ ಮುಷ್ಕರ ಆರಂಭಗೊಂಡಿದ್ದು, ಪ್ರಧಾನ ಮಂತ್ರಿ ಅವರು ಅಧಿಕಾರದಲ್ಲಿ ಇರುವವರೆಗೂ ಈ ಮುಷ್ಕರ ಮುಂದುವರಿಯಲಿದೆ ಎಂದು ಮಾವೋ ಮುಖಂಡ, ಮಾಜಿ ಪ್ರಧಾನಿ ಪ್ರಚಂಡ ಘೋಷಿಸಿದ್ದಾರೆ.