ಸ್ನೇಹಹಸ್ತ ಚಾಚಿದ್ರೆ ಮಾತ್ರ ರಕ್ಷಣೆ ಕೊಡುವೆ: ಭುಟ್ಟೋಗೆ ಮುಷ್!
ಲಂಡನ್, ಸೋಮವಾರ, 3 ಮೇ 2010( 15:17 IST )
'ಪಾಕಿಸ್ತಾನದಲ್ಲಿ ನಿಮಗೆ ರಕ್ಷಣೆ ಬೇಕಿದ್ದಲ್ಲಿ, ನೀವು ನನ್ನ ಬಳಿ ಸ್ನೇಹಪರವಾಗಿ (ತನ್ನ ಬಗ್ಗೆ ಮೃದುಧೋರಣೆ ಹೊಂದಬೇಕು) ಇರಬೇಕು' ಹೀಗೆಂದು ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಾಗಾರ, ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಬೆನಜೀರ್ ಭುಟ್ಟೋಗೆ ಎಚ್ಚರಿಕೆ ನೀಡಿರುವುದಾಗಿ ಹತ್ಯೆಗೊಳಗಾದ ಭುಟ್ಟೋ ಮಾಜಿ ನಿಕಟವರ್ತಿಯೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
ಮುಷ್ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತನ್ನ ಜೀವಕ್ಕೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನೀಡಬೇಕೆಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರು ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ಮುಷ್, ದೇಶದಲ್ಲಿ ಚುನಾವಣೆ ನಡೆಯುವವರೆಗೆ ಪಾಕಿಸ್ತಾನಕ್ಕೆ ಹಿಂದಿರುಗಬೇಡಿ ಎಂದು ಎಚ್ಚರಿಸಿದ್ದೇನೆ. ಒಂದು ವೇಳೆ ಪಾಕಿಸ್ತಾನಕ್ಕೆ ಬರುವುದೇ ಹೌದಾದಲ್ಲಿ ನೀವು ನನ್ನ ಬಗ್ಗೆ ಸ್ನೇಹಪರವಾಗಿ ಇರಬೇಕು ಎಂದು ಬೆದರಿಕೆ ಹಾಕಿರುವುದಾಗಿ ಭುಟ್ಟೋ ಅವರ ಮಾಜಿ ಸಹಾಯಕ ಹುಸೈನ್ ಹಕ್ಕಾನಿ ಅವರ ಹೇಳಿಕೆ ಉಲ್ಲೇಖಿಸಿ ಸಂಡೇ ಟೈಮ್ಸ್ ವರದಿ ಮಾಡಿದೆ.
ಹಕ್ಕಾನಿ ಇದೀಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ಅವರು ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೇ ತಾನು ಪಾಕಿಸ್ತಾನಕ್ಕೆ ಹಿಂದಿರುಗುತ್ತಿದ್ದು ರಕ್ಷಣೆ ಕುರಿತು ಮಾತುಕತೆ ನಡೆಸುವಂತೆ ಅಮೆರಿಕ ಮತ್ತು ಬ್ರಿಟನ್ ಅಧಿಕಾರಿಗಳ ನೆರವು ಕೇಳಿದ್ದರು. ಈ ಬಗ್ಗೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಅನ್ನೆ ಪ್ಯಾಟರ್ಸನ್ ಅವರಿಗೂ ತಿಳಿಸಿದ್ದೆ. ಆದರೆ ಪ್ಯಾಟರ್ಸನ್ ಕೂಡ ಆಕೆ ಬಗ್ಗೆ ಸಹಾನುಭೂತಿ ತೋರಿಲ್ಲ ಎಂದು ಹಕ್ಕಾನಿ ದೂರಿದ್ದಾರೆ.
ಆದರೆ ಇವೆಲ್ಲಾ ರಂಪಾಟಗಳ ನಡುವೆ ಭುಟ್ಟೋ ತಾಯ್ನಾಡಿಗೆ ಹಿಂತಿರುಗಿದ್ದರು. 2007 ಡಿಸೆಂಬರ್ 27ರಂದು ರಾವಲ್ಪಿಂಡಿಯ ಲಿಯಾಖತ್ ಪಾರ್ಕ್ ಸಮೀಪ ಚುನಾವಣಾ ರಾಲಿಯಲ್ಲಿ ಭಾಷಣ ಮಾಡಲು ತೆರಳುತ್ತಿದ್ದ ಸಂದರ್ಭ ಬೆನಜೀರ್ ಭುಟ್ಟೋವನ್ನು ಹತ್ಯೆಗೈಯಲಾಗಿತ್ತು.