ಫೋನ್ಸೆಕಾ ವಿರುದ್ಧ ಕೋರ್ಟ್ ಮಾರ್ಷಲ್ ರದ್ದು ಮಾಡಿ: ಕೋರ್ಟ್
ಕೊಲಂಬೊ, ಸೋಮವಾರ, 3 ಮೇ 2010( 20:02 IST )
ಶ್ರೀಲಂಕಾ ಮಿಲಿಟರಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಶ್ರೀಲಂಕಾ ನ್ಯಾಯಾಲಯ ಸೋಮವಾರ ಸೂಚಿಸಿದೆ.
ಫೋನ್ಸೆಕಾ ಕೋರ್ಟ್ ಮಾರ್ಷಲ್ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮಿಲಿಟರಿ ಟ್ರಿಬ್ಯುನಲ್‌ಗೆ ಈ ಆದೇಶ ನೀಡಿದ್ದು, ಮಿಲಿಟರಿ ಕಾನೂನು ಪ್ರಕ್ರಿಯೆಯನ್ನು ತೀರ್ಪು ಹೊರಬೀಳುವವರೆಗೆ ರದ್ದು ಪಡಿಸುವಂತೆ ತಿಳಿಸಿದೆ.
ಜನವರಿ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಯಗೊಂಡಿದ್ದು, ಮಹೀಂದಾ ರಾಜಪಕ್ಸೆ ಪುನರಾಯ್ಕೆಗೊಂಡಿದ್ದರು. ಚುನಾವಣೆಯ ನಂತರ ದೇಶದಲ್ಲಿ ಮಿಲಿಟರಿ ಆಡಳಿತ ಹೇರಲು ಫೋನ್ಸೆಕಾ ಸಂಚು ರೂಪಿಸಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಮಿಲಿಟರಿಯಲ್ಲಿಯೂ ಅವ್ಯವಹಾರ ನಡೆಸಿರುವ ಆರೋಪವನ್ನು ಫೋನ್ಸೆಕಾ ಎದುರಿಸುತ್ತಿದ್ದು ಅವರು ಎರಡನೇ ಕೋರ್ಟ್ ಮಾರ್ಷಲ್ ಎದುರಿಸುತ್ತಿದ್ದಾರೆ. ಈ ಎರಡೂ ಆರೋಪಗಳು ರಾಜಕೀಯ ಪ್ರೇರಿತ ಎಂದು ಫೋನ್ಸೆಕಾ ಆರೋಪಿಸಿದ್ದಾರೆ.
ಆ ನಿಟ್ಟಿನಲ್ಲಿ ಮೊದಲ ಕೋರ್ಟ್ ಮಾರ್ಷಲ್ ರದ್ದುಪಡಿಸುವ ಕೋರ್ಟ್ ಆದೇಶ ಫೋನ್ಸೆಕಾ ಅವರಿಗೆ ದೊಡ್ಡ ಜಯ ದೊರೆತಂತಾಗಿದೆ ಎಂದು ಫೋನ್ಸೆಕಾ ಅವರ ಬೆಂಬಲಿತ ಶಾಸಕ ತಿರಾನ್ ಅಲ್ಲೆಸ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.