ಚೀನಾ-ಪಾಕ್ ನಾಗರಿಕ ಪರಮಾಣು ಒಪ್ಪಂದಕ್ಕೆ ತನ್ನ ಯಾವುದೇ ಅಭ್ಯಂತರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆದರೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಎನ್‌ಸಿಜಿ ನಿಯಮಗಳನ್ನು ಪಾಲಿಸತಕ್ಕದ್ದು ಎಂದು ತಾಕೀತು ಮಾಡಿದೆ.
ಒಪ್ಪಂದದ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ನ್ಯೂಕ್ಲಿಯರ್ ಸಪ್ಲೆಯರ್ ಗ್ರೂಪ್ (ಎನ್‌ಸಿಜಿ) ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಬೇಕು ಎಂದು ಸ್ಟೇಟ್ ಆಫ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೆ ವರದಿಗಾರರಿಗೆ ತಿಳಿಸಿದ್ದಾರೆ.
ಆದರೆ ಈ ವಿಷಯವು ಮುಂಬರುವ ಅಮೆರಿಕ-ಚೀನಾ ತಂತ್ರಕುಶಲತೆಯ ಹಾಗೂ ಹಣಕಾಸು ಮಾತುಕತೆಯಲ್ಲಿ ಪ್ರಸ್ತಾಪನೆಯಾಗಲಿದೆಯೇ ಎಂಬುದರ ಬಗ್ಗೆ ಕ್ರೌಲೆ ಸ್ಪಷ್ಟನೆ ನೀಡಿಲ್ಲ. ಈ ವಾರ ನಡೆಯಲಿರುವ ಕಾರ್ಯದರ್ಶಿಗಳ ಮಾತುಕತೆಯಲ್ಲಿ ವಿಷಯ ಪ್ರಸ್ತಾಪನೆಯಾಗಲಿದೆಯೇ ಎಂಬುದು ತಿಳಿದಿಲ್ಲ ಎಂದು ಹೇಳಿದರು.
ಪ್ರಸಕ್ತ ಬೀಜಿಂಗ್‌ನಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಚೀನಾದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.