ಕಳೆದ ಆರು ದಿನಗಳಿಂದ ವೀಡಿಯೋ ಹಂಚಿಕೆ ಜಾಲತಾಣವಾಗಿರುವ ಯೂ ಟ್ಯೂಬ್ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಆ ಮೂಲಕ ಯೂ ಟ್ಯೂಬ್ ಜಾಲತಾಣದ ಸೌಲಭ್ಯ ಅಂತಾರ್ಜಾಲ ಗ್ರಾಹಕರಿಗೆ ಲಭ್ಯವಾಗಲಿದೆ.
ಈ ಹಿಂದೆ ಧಾರ್ಮಿಕ ನಿಂದನೆಯ ವಿಷಯ ಹೊಂದಿದೆ ಎಂಬ ಆರೋಪದಡಿಯಲ್ಲಿ ಯೂ ಟ್ಯೂಬ್ ಪ್ರಸರಣಕ್ಕೆ ಪಾಕಿಸ್ತಾನ ದೂರಸಂಪರ್ಕ ಇಲಾಖೆ ತಡೆಹಿಡಿದಿತ್ತು. ಆದರೆ ಇದೀಗ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯವು ತಡೆಯನ್ನು ರದ್ದುಗೊಳಿಸಿರುವುದಾಗಿ ಹೇಳಿದೆ.
ಇತ್ತೀಚೆಗಷ್ಟೇ ಪ್ರವಾದಿ ಮೊಹಮ್ಮದ್ ಪೈಗಂಬರ್ ವ್ಯಂಗ ಚಿತ್ರ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣವಾದ ಫೇಸ್‌ಬುಕ್‌ನ್ನು ಕೂಡಾ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
'ಆಕ್ಷೇಪಣಾರ್ಹ ವಿಷಯ'ಕ್ಕೆ ಇದುವರೆಗೆ ಒಟ್ಟು 800ರಷ್ಟು ಜಾಲತಾಣಗಳನ್ನು ಅಂತಾರ್ಜಾಲ ಸೇವಾ ಸರಬರಾಜು ಇಲಾಖೆ ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.