ಭಾರತ ಮತ್ತು ಪಾಕಿಸ್ತಾನದಿಂದ 'ವಧು'ಗಳನ್ನು 'ಆಮದು' ಮಾಡಿಕೊಳ್ಳುವುದರ ಬದಲು, ಸ್ಕಾಟ್ಲೆಂಡ್ ಸಂಜಾತರನ್ನೇ ಮದುವೆಯಾಗುವಂತೆ ಗ್ಲಾಸ್ಗೋ ಮೂಲದ ಇಸ್ಲಾಮಿಕ್ ಮತ ಪಂಡಿತರೊಬ್ಬರು ಭಾರತೀಯ ಉಪಖಂಡ ಮೂಲದ ಬ್ರಿಟಿಷ್ ಮುಸ್ಲಿಂ ಯುವಕರಿಗೆ ಕರೆ ನೀಡಿದ್ದಾರೆ.
ಬ್ರಿಟನ್‌ನಲ್ಲೇ ಹುಟ್ಟಿ ಬೆಳೆದ ಮಕ್ಕಳ ಪೋಷಕರು ಭಾರತ ಮತ್ತು ಪಾಕಿಸ್ತಾನಗಳಿಂದ ಸೂಕ್ತ ವಧುಗಳನ್ನು ಹುಡುಕಿ ಮದುವೆ ಮಾಡಿಸುವ ಸಂಪ್ರದಾಯ ಬೆಳೆದುಬಿಟ್ಟಿದೆ. ಇದಕ್ಕೆ ಕಾರಣವೆಂದರೆ ಈ ದೇಶಗಳ ಹುಡುಗಿಯರು ಸುಸಂಸ್ಕೃತರಾಗಿರುವುದು ಮತ್ತು ಬ್ರಿಟನ್‌ನಲ್ಲೇ ಹುಟ್ಟಿ ಬೆಳೆದ ಏಷ್ಯನ್ ತರುಣಿಯರಿಗಿಂತ ಉತ್ತಮ ಪತ್ನಿಯಾಗಬಲ್ಲರು ಎಂಬ ನಂಬಿಕೆ.
ತತ್ಪರಿಣಾಮವಾಗಿ, ಅಲ್ಲೇ ಹುಟ್ಟಿ ಬೆಳೆದ ಏಷ್ಯಾ ಮೂಲದ ತರುಣಿಯರಿಗೆ ಸೂಕ್ತ ವರ ದೊರೆಯುತ್ತಿಲ್ಲ. ಎಲ್ಲ ಧರ್ಮಗಳಲ್ಲಿಯೂ ಇಂಥ ಪರಿಸ್ಥಿತಿ ಇದ್ದರೂ, ಮೊದಲ ಬಾರಿ ಗ್ಲಾಸ್ಗೋ ಮುಸ್ಲಿಂ ಪಂಡಿತ ಶೇಖ್ ಜಮೀಲ್ ಅವರು ಈ ಕುರಿತು ಧ್ವನಿಯೆತ್ತಿದ್ದಾರೆ.
ಪರಿಸ್ಥಿತಿ ಗಂಭೀರವಾಗಿಬಿಟ್ಟಿದೆ. ದೇಶಾದ್ಯಂತ ಉತ್ತಮ ಶಿಕ್ಷಿತರಾಗಿ ವಿವಾಹಕ್ಕೆ ಸಿದ್ಧರಾಗಿರುವ ತರುಣಿಯರಿದ್ದಾರೆ, ಆದರೆ ಅವರ ಕೈಹಿಡಿಯಲು ಇಲ್ಲಿನವರು ಯಾರೂ ಮುಂದೆ ಬರುತ್ತಿಲ್ಲ. ತರುಣರೆಲ್ಲರೂ ಭಾರತ-ಪಾಕ್ ವಧುಗಳನ್ನೇ ಬಯಸುತ್ತಿರುವುದರಿಂದಾಗಿ ಇಲ್ಲಿನ ವಧುಗಳಿಗೆ ವರ ಮಹಾಶಯರ ಕೊರತೆಯೇರ್ಪಟ್ಟಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ, ಗ್ಲಾಸ್ಗೋದಲ್ಲಿ ಕೌನ್ಸೆಲಿಂಗ್ ಕೇಂದ್ರ ತೆರೆದಿರುವ ಶೇಖ್ ಜಮೀಲ್, ಇಂಗ್ಲಿಷ್ ಬಾರದ ವಧುಗಳನ್ನು ಇಲ್ಲಿಗೆ ಕರೆತಂದರೆ, ಬ್ರಿಟಿಷ್ ಸಮಾಜಕ್ಕೆ ಅವರು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಅಂಶವನ್ನೂ ಹೊರಗೆಡಹಿದ್ದಾರೆ.
ಹೀಗಾಗಿ ಇಲ್ಲಿನವರನ್ನೇ ಮದುವೆಯಾದರೆ, ಇಂಗ್ಲಿಷ್ ಭಾಷೆಯ ತೊಂದರೆಯೂ ನೀಗುತ್ತದೆ, ಬ್ರಿಟಿಷ್ ಸಂಸ್ಕೃತಿಗೂ ಒಗ್ಗಿಕೊಂಡಿರುವುದರಿಂದ ಸಮಸ್ಯೆ ಎದುರಾಗದು ಎನ್ನುತ್ತಾರೆ ಜಮೀರ್.