ತನ್ನ ವಿದೇಶಾಂಗ ನೀತಿಗಳಲ್ಲಿ ಮೊದಲ ಆದ್ಯತೆ ಪಾಕಿಸ್ತಾನಕ್ಕೆ ನೀಡುವುದಾಗಿ ನೂತನ ಬ್ರಿಟನ್ ಸರಕಾರ ಹೇಳಿಕೊಂಡಿದೆ. ಅದೇ ವೇಳೆ ಮುಂದಿನ ಕೆಲವು ವಾರದೊಳಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಾಗಿ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ವಿಲಿಯಮ್ ಹಾಗ್ಯೂ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟು ಶಮನಕ್ಕೆ ಬ್ರಿಟನ್ ಯತ್ನಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಲಿಯಮ್, ಇನ್ನೊಂದು ದೇಶವು ಯಾವ ರೀತಿ ದ್ವಿಪಕ್ಷೀಯ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿಕೊಡುವುದು ನಮ್ಮ ಕೆಲಸವಲ್ಲ. ಅಲ್ಲದೆ ಈ ಬಗ್ಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಯಾವುದೇ ಸಲಹೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಉಭಯ ದೇಶಗಳ ಇತ್ತೀಚೆಗಿನ ಬೆಳವಣಿಗೆ ಸ್ವಾಗತಾರ್ಹ. ಅಂತಹ ಬೆಳವಣಿಯು ಮುಂದೆ ಆ ಪ್ರದೇಶಗಳಲ್ಲಿ ಶಾಂತಿ ನೆಲೆಸಿಕೊಳ್ಳಲು ಸಹಾಯಕವಾಗಲಿದೆ ಎಂದು ಇತ್ತೀಚೆಗೆ ಭೂತಾನ್‌ನಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಯೂಸುಫ್ ರಾಜಾ ಗಿಲಾನಿ ನಡುವಣ ಭೇಟಿ ಕುರಿತು ವಿಲಿಯಮ್ ಅಭಿಪ್ರಾಯಪಟ್ಟರು.
ತನ್ನ ಇಸ್ಲಾಮಾಬಾದ್ ಭೇಟಿ ವೇಳೆ ತಾನು ಭಾರತ-ಪಾಕ್ ಸಂಬಂಧದ ಬಗ್ಗೆ ಅಲ್ಲಿನ ನಾಯಕರುಗಳೊಂದಿಗೆ ಚರ್ಚಿಸಲಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.