ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಿಸುತ್ತಿರುವ ಅಮೆರಿಕದ ಮಿಲಿಟರಿ ಪಡೆಯ ಸುಮಾರು ಸಾವಿರ ಸೈನಿಕರು ಸಾವನ್ನಪ್ಪಿದ್ದು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಮಟ್ಟಹಾಕುವುದು ಅಧ್ಯಕ್ಷ ಬರಾಕ್ ಒಬಾಮಾ ನೇತೃತ್ವದ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಉಗ್ರರ ವಿರುದ್ಧ ಕಾರ್ಯಾಚರಿಸುತ್ತಿರುವ ಅಮೆರಿಕದ ಸೈನಿಕರ ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಕಳೆದ ಒಂಬತ್ತು ವರ್ಷಗಳ ಹೋರಾಟದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ತಾಲಿಬಾನ್ ಉಗ್ರರನ್ನು ಮಟ್ಟಹಾಕುವಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಾಗಿಲ್ಲ.
ಆ ನಿಟ್ಟಿನಲ್ಲಿ ಇಸ್ಲಾಮಿಕ್ ಉಗ್ರರ ವಿರುದ್ಧದ ಹೋರಾಟವನ್ನು ಇರಾಕ್‌ನಿಂದ ಅಫ್ಘಾನಿಸ್ತಾನಕ್ಕೆ ಬದಲಾಯಿಸುವ ನಿರ್ಧಾರವನ್ನು ಬರಾಕ್ ಒಬಾಮಾ ಕೈಗೊಂಡಿದ್ದಾರೆ. ದಕ್ಷಿಣ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಪಡೆಗಳು ಈಗಾಗಲೇ ತಾಲಿಬಾನ್, ಅಲ್ ಖಾಯಿದಾ ಉಗ್ರರನ್ನು ಮಟ್ಟಹಾಕುವ ಕಾರ್ಯದಲ್ಲಿ ಮುನ್ನುಗ್ಗಿದೆ ಎಂದು ಅಮೆರಿಕ ಹೇಳಿದೆ.