ಪಾಕಿಸ್ತಾನದಲ್ಲಿ ಕಳೆದ ಎರಡು ವಾರಗಳ ಹಿಂದೆ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ವಿರುದ್ಧ ಹೇರಿದ್ದ ನಿಷೇಧವನ್ನು ಹಿಂತೆಗೆಯುವಂತೆ ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಫೇಸ್‌ಬುಕ್ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕ್ಯಾರಿಕೇಚರ್ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಫೇಸ್‌ಬುಕ್ ಧಾರ್ಮಿಕ ನಿಂದನೆ ಮಾಡಿದೆ ಎಂದು ಆರೋಪಿಸಿ ಪಾಕ್ ಫೇಸ್‌ಬುಕ್ ಮೇಲೆ ನಿಷೇಧ ಹೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ನ್ಯಾಯಮೂರ್ತಿ ಇಜಾಜ್ ಚೌಧರಿ, ಫೇಸ್‌ಬುಕ್ ಬಳಕೆಗೆ ಕೂಡಲೇ ಅವಕಾಶ ಮಾಡಿಕೊಡಿ, ಮಾಹಿತಿ ಪಡೆಯಲು ತಡೆಯೊಡ್ಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೇ ಮುಂದಿನ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದ ನ್ಯಾಯಪೀಠ, ಮುಂದಿನ ದಿನಾಂಕದೊಳಗೆ ನಿರ್ಧಾರದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ನಾನು ಈ ಪ್ರಕರಣವನ್ನು ಮುಕ್ತಾಯಗೊಳಿಸಿಲ್ಲ ಎಂದಿರುವ ನ್ಯಾಯಮೂರ್ತಿ, ಜೂನ್ 15ರೊಳಗೆ ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ ಮತ್ತೆ ಧಾರ್ಮಿಕ ನಿಂದನೆಗೆ ಸಂಬಂಧಿಸಿದ ಮಾಹಿತಿ, ಕ್ಯಾರಿಕೇಚರ್ ಅಫ್‌ಲೋಡ್ ಮಾಡಿದ್ದು ಗಮನಿಸಿದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಡೆಪ್ಲ್ಯುಟಿ ಅಟಾರ್ನಿ ಜನರಲ್ ನಾವೀದ್ ಇನಾಯತ್ ಮಲಿಕ್ ಅವರಿಗೆ ಸೂಚಿಸಿದರು.