ಲಷ್ಕರ್ ಇ ತೋಯ್ಬಾ ಮುಖ್ಯಸ್ಥ, ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಫೀದ್ ಸಯೀದ್‌ನನ್ನು ಖುಲಾಸೆಗೊಳಿಸಿರುವ ಪಾಕಿಸ್ತಾನ ಸುಪ್ರೀಂ ಕೋರ್ಟ್ ನಿರ್ಧಾರದ ಕುರಿತು ಕೊನೆಗೂ ಪಾಕಿಸ್ತಾನ ಬಾಯಿಬಿಟ್ಟಿದ್ದು, ಹಫೀಜ್ ವಿರುದ್ಧ ಭಾರತ ನೀಡಿದ್ದ ಸಾಕ್ಷ್ಯಾಧಾರವು ಕಾನೂನುಮಾನ್ಯತೆ ಹೊಂದಿಲ್ಲ ಎಂದು ವಾದಿಸಿದೆ.
ಟೈಮ್ ನೌ ಜೊತೆ ಮಾತನಾಡಿದ ಪಾಕ್ ವಿದೇಶಾಂಗ ಸಚಿವ ಶಾ ಮಹಮದ್ ಖುರೇಶಿ, ಭಾರತ ಒದಗಿಸಿದ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲದ ಕಾರಣದಿಂದಾಗಿಯೇ ಹಫೀಜ್ ಖುಲಾಸೆಗೊಂಡಿದ್ದ ಎಂದೂ ಪ್ರತಿಕ್ರಿಯಿಸಿದ್ದಾರೆ.
ವಿಶ್ವಾಸದ ಕೊರತೆಯನ್ನು ಸರಿಪಡಿಸುವುದಕ್ಕಾಗಿ ಉಭಯ ದೇಶಗಳ ಪ್ರಧಾನ ಮಂತ್ರಿಗಳು ತಮ್ಮ ತಮ್ಮ ವಿದೇಶಾಂಗ ಸಚಿವರಿಗೆ ಅಧಿಕಾರ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜೂನ್ 26ರಂದು ತಾನು ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮಾವೇಶದಲ್ಲಿ, ಭಾರತೀಯ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ, ಅಂತೆಯೇ ಜುಲೈ 15ರಂದು ಭಾರತದ ವಿದೇಶಾಂಗ ಸಚಿವರೊಂದಿಗೆ ಕೂಡ ಮಾತನಾಡಲಿದ್ದೇನೆ. ಈ ಸಂದರ್ಭದಲ್ಲಿ ಅವರು ತಮ್ಮ ತಮ್ಮ ಕಳವಳಗಳನ್ನು ವ್ಯಕ್ತಪಡಿಸಬಹುದು ಎಂದೂ ಖುರೇಶಿ ನುಡಿದರು.