ತಮ್ಮ ದೇಶದಲ್ಲಿ ಭಾರತೀಯ ಕಂಪನಿಯೊಂದು ಪ್ರಾಣಿಗಳ ಪರೀಕ್ಷಾ ಔಷಧಿ ಪ್ರಯೋಗಾಲಯವನ್ನು ಸ್ಥಾಪಿಸುತ್ತಿರುವುದನ್ನು ಸಮರ್ಥಿಸಿಕೊಂಡಿರುವ ಮಲೇಷ್ಯಾ ಸಚಿವರೊಬ್ಬರು, ಮಂಗಗಳು ಮತ್ತು ಇಲಿಗಳನ್ನು ದೇವರು ಸೃಷ್ಟಿಸಿದ್ದೇ ಮಾನವರ ಲಾಭಕ್ಕಾಗಿ ಮತ್ತು ಪ್ರಯೋಗಕ್ಕಾಗಿ ಎಂದು ಹೇಳಿದ್ದಾರೆ!
ಮಲಕ್ಕಾದಲ್ಲಿ ಜೈವಿಕ ತಂತ್ರಜ್ಞಾನ ಕೇಂದ್ರ ಸ್ಥಾಪಿಸುವ ವಿವೋ ಬಯೊಟೆಕ್ ಲಿಮಿಟೆಡ್ ಸಂಸ್ಥೆಯ ಯೋಜನೆಯನ್ನು ಪ್ರಾಣಿಗಳ ಹಕ್ಕುಗಳ ಹೋರಾಟಗಾರರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ.
ಆದರೆ ಮಲಕ್ಕಾ ಮುಖಅಯಮಂತ್ರಿ ಮೊಹಮದ್ ಅಲಿ ರುಸ್ತಮ್ ಅವರು ಮಾತನಾಡಿ, ಪ್ರಯೋಗಾಲಯಕ್ಕೆ ಸರಕಾರೀ ಅನುಮತಿ ದೊರಕಿದೆ ಮತ್ತು ಔಷಧಿ ತಯಾರಿಗೆ ಪ್ರಾಣಿಗಳ ಮೇಲೆ ಪರೀಕ್ಷೆ ಮಾಡುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಪ್ರಾಣಿಗಳನ್ನು ದೇವರು ಸೃಷ್ಟಿ ಮಾಡಿರುವುದೇ ಮಾನವರ ಅನುಕೂಲಕ್ಕಾಗಿ. ಇದಕ್ಕಾಗಿಯೇ ಅವನು ಇಲಿಗಳು ಮತ್ತು ಮಂಗಗಳನ್ನು ಸೃಷ್ಟಿ ಮಾಡಿದ್ದಾನೆ... ನಮಗೆ ಮಾನವರ ಮೇಲೆ ಪ್ರಯೋಗ ಮಾಡುವುದು ಸಾಧ್ಯವಿಲ್ಲ, ಅಲ್ಲವೇ ಎಂದು ರುಸ್ತಮ್ ಅವರನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ.
ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸದಂತೆ ಮತ್ತು ಸೂಕ್ತ ವಿಧಾನವನ್ನು ಅನುಸರಿಸುವಂತೆ ಮಲೇಷ್ಯಾದ ಏಜೆನ್ಸಿಗಳು ಮೇಲ್ವಿಚಾರಣೆ ನಡೆಸಲಿವೆ ಎಂದು ಕೂಡ ಅವರು ಹೇಳಿದ್ದಾರೆ.