ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಮಕ್ಕಳ ಲೈಂಗಿಕ ಸಾಹಿತ್ಯಗಳನ್ನು ಮಾರಾಟ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಸೇಲ್ಸ್‌ಮನ್‌ಗೆ ಆಸ್ಟ್ರೇಲಿಯಾ ಸೋಮವಾರ ಜೈಲುಶಿಕ್ಷೆ ವಿಧಿಸಿದೆ.
16 ವರ್ಷದ ಕೆಳಗಿನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಒಪ್ಪಿಕೊಂಡ ಮುಜಾಹಿದ್ ಉರ್ ರಹಮಾನ್(29)ಗೆ ವಿಕ್ಟೋರಿಯನ್ ಕೌಂಟಿ ಕೋರ್ಟ್ ಮೂರು ವರ್ಷ ಒಂಬತ್ತು ತಿಂಗಳು ಕಾಲ ಜೈಲುಶಿಕ್ಷೆ ವಿಧಿಸಿದೆ. ಅಲ್ಲದೇ ಎರಡು ವರ್ಷ ಮೂರು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೂ ಅವಕಾಶ ಇಲ್ಲ ಎಂದು ಸೂಚಿಸಿದೆ.
ಮುಜಾಹಿದ್ ಫೋಕ್ಸ್‌ಟೆಲ್ ಉದ್ಯೋಗಿಯಾಗಿದ್ದು, ಈತ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮೆಲ್ಬೊರ್ನ್‌ನ ಆಗ್ನೇಯ ಪ್ರದೇಶದಲ್ಲಿ 9ರ ಹರೆಯದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕಳೆದ ಸೆಪ್ಬೆಂಬರ್ 30ರಂದು ಮುಜಾಹಿದ್ ನೊಬೆಲ್ ಪಾರ್ಕ್ ನಿವಾಸಿಯೊಬ್ಬರ ಹತ್ತಿರ ಟಿವಿ ಮಾರಾಟ ಮಾಡಲು ಬಂದಿರುವುದಾಗಿ ಹೇಳಿದ್ದ. ಅದಕ್ಕೆ ಆಕೆ ತಮಗೇನೂ ಬೇಡ ಎಂದಿದ್ದಳು. ನಂತರ ಮುಜಾಹಿದ್ ಮನೆಯ ಹೊರಗಿದ್ದ 9ರ ಹರೆಯದ ಮಗಳನ್ನು ಎತ್ತಿಹಿಡಿದು ಮುಖಕ್ಕೆ ಮುತ್ತು ಕೊಟ್ಟು, ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿ ಕೋರ್ಟ್‌ಗೆ ತಿಳಿಸಿದ್ದಳು.
ನೀನು ಅಪ್ರಾಪ್ತ ಬಾಲಕಿಯನ್ನು ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಅವರವರ ಮನೆಯಲ್ಲಿ ಸುರಕ್ಷಿತರು ಎಂಬ ಭಾವನೆಗೆ ನೀನು ಧಕ್ಕೆ ತಂದಿರುವೆ ಎಂದು ನ್ಯಾಯಮೂರ್ತಿ ಪೌಲ್ ಲಾಕಾವಾ ಅಭಿಪ್ರಾಯವ್ಯಕ್ತಪಡಿಸಿ, ಶಿಕ್ಷೆ ವಿಧಿಸಿದರು.