ಚೀನಾದಲ್ಲಿ ಕುಟುಂಬಕ್ಕೊಂದು ಮಗು ನೀತಿ ಅನುಸರಿಸುತ್ತಿಲ್ಲವಂತೆ!
ಲಂಡನ್, ಸೋಮವಾರ, 31 ಮೇ 2010( 19:31 IST )
ಚೀನಾದಲ್ಲಿನ ಕುಟುಂಬಕ್ಕೊಂದೇ ಮಗು ಸಾಕು ಎಂಬ ನೀತಿಯನ್ನು ಅನುಸರಿಸುವ ನೆಪದಲ್ಲಿ ಚೀನಾ ಜನರು ತಮಗೆ ಹುಟ್ಟಿದ ಮಕ್ಕಳನ್ನೇ ಬಚ್ಚಿಟ್ಟುಕೊಳ್ಳುತ್ತಿದ್ದಾರಂತೆ. ಈ ರೀತಿ ವರ್ಷಕ್ಕೆ 3 ಮಿಲಿಯನ್ ಮಕ್ಕಳನ್ನು ಬಚ್ಚಿಟ್ಟುಕೊಳ್ಳುವ ಅಂಶವೊಂದು ಬಯಲಾಗಿದೆ.
ಚೀನಾದ ಡೆಮೋಗ್ರಾಫರ್ ಮತ್ತು ಚೀನಾದ ಜನಸಂಖ್ಯಾ ಹಾಗೂ ಕುಟುಂಬ ಕಲ್ಯಾಣ ಸಮಿತಿಯ ಮಾಜಿ ಸದಸ್ಯರೂ ಆದ ಲಿಯಾಂಗ್ ಜೋಂಗ್ ಟಾಂಗ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
1990ರಲ್ಲಿ ರಾಷ್ಟ್ರೀಯ ಜನಗಣತಿಯ ಪ್ರಕಾರ 23ಮಿಲಿಯನ್ ಶಿಶುಗಳು ಹುಟ್ಟಿದ್ದವು, ಆದರೆ 2000ದಲ್ಲಿನ ಜನಗಣತಿಯ ಪ್ರಕಾರ ಹತ್ತರ ಹರೆಯದ ಮಕ್ಕಳ ಸಂಖ್ಯೆ ಕೇವಲ 26 ಮಿಲಿಯನ್ ಆಗಿದೆ. ಅಂದರೆ ಮೂರು ಮಿಲಿಯನ್ ಜಾಸ್ತಿಯಾಗಿದೆ. ಒಂದು ವೇಳೆ ಶಿಶು ಮರಣ ಸಂಭವಿಸಿದ್ದರೆ 10ನೇ ವರ್ಷದ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ ಇಲ್ಲಿ ಹೆಚ್ಚಾಗಿದೆ.
ಈ ಕುತೂಹಲದ ಅಂಶದ ಬಗ್ಗೆಯೇ ಲಿಯಾಂಗ್ ಸಂಶೋಧನೆ ನಡೆಸಿ, ಚೀನಾ ಜನರು ಕುಟುಂಬಕ್ಕೊಂದೇ ಮಗು ಎಂಬ ನೀತಿಯನ್ನು ಪಾಲಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ ಚೀನಾ ಜನರು ಹೆಚ್ಚಾಗಿ ಗಂಡು ಮಕ್ಕಳಿಗೆ ಆದ್ಯತೆ ನೀಡುತ್ತಿದ್ದಾರಂತೆ!
ಆ ನಿಟ್ಟಿನಲ್ಲಿ ಚೀನಾದ ಜನರು ಕುಟುಂಬಕ್ಕೊಂದೇ ಮಗು ಎಂಬ ನೀತಿಯನ್ನು ಅನುಸರಿಸುವುದಾದರೆ 2020ನೇ ಇಸವಿ ತಲುಪುವಾಗ ಚೀನಾದಲ್ಲಿ ಗಂಡಸರ ಸಂಖ್ಯೆ 30ಮಿಲಿಯನ್ ತಲುಪುತ್ತದೆ. ಅಲ್ಲದೇ ಹೆಚ್ಚಿನ ಪೋಷಕರು ಭ್ರೂಣ ಪತ್ತೆಗಾಗಿ ಆಲ್ಟ್ರಾಸೌಂಡ್ ಪರೀಕ್ಷೆ ನಡೆಸುತ್ತಿರುವುದು ವಿಷಾದನೀಯ ಎಂದು ಲಿಯಾಂಗ್ ತಿಳಿಸಿದ್ದಾರೆ.