ಇಲ್ಲಿನ ಎರಡು ಮಸೀದಿಗಳಲ್ಲಿ ಕಳೆದ ಶುಕ್ರವಾರ ಭಯೋತ್ಪಾದನಾ ದಾಳಿಗೆ ಬಲಿಯಾಗಿದ್ದ ಅಲ್ಪಸಂಖ್ಯಾತ ಅಹ್ಮದಿ ಪಂಥಕ್ಕೆ ಸೇರಿದ 95 ಮಂದಿಯ ಸಾಮೂಹಿಕ ಶವ ಸಂಸ್ಕಾರಕ್ಕೆ ಪಾಕಿಸ್ತಾನೀ ಸಚಿವರು, ರಾಜಕಾರಣಿಗಳು ಮತ್ತು ಇತರ ಗಣ್ಯರು ಹಾಜರಾಗದೇ ಇರುವ ಮೂಲಕ ಭಾರೀ ಊಹಾಪೋಹಕ್ಕೆ ಕಾರಣರಾದರು.
ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಶಾಬಾಜ್ ಶರೀಫ್, ರಾಜ್ಯಪಾಲ ಸಲ್ಮಾನ್ ತಸೀರ್ ಮತ್ತು ಕೆಲವು ರಾಜಕಾರಣಿಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿದ್ದ ಗಾಯಾಳುಗಳನ್ನು ಭೇಟಿಯಾಗಿದ್ದರು. ಶುಕ್ರವಾರದ ದಾಳಿ ಕುರಿತು ರಾಜಕಾರಣಿಗಳಿಂದ ಹಾಗೂ ಧಾರ್ಮಿಕ ಮುಖಂಡರಿಂದ ಸಾಕಷ್ಟು ಖಂಡನಾ ಹೇಳಿಕೆಗಳು ಹೊರಬಂದಿದ್ದರೂ, ಅಂತ್ಯಸಂಸ್ಕಾರದ ವೇಳೆ ಅವರೆಲ್ಲರೂ ಸುಮ್ಮನಿದ್ದರು.
ಅಹ್ಮದಿಗಳನ್ನು ಪಾಕಿಸ್ತಾನದಲ್ಲಿ ಮುಸ್ಲಿಮೇತರರು ಎಂದು ಪರಿಗಣಿಸಲಾಗಿದ್ದು, ಈ ಸಂಗತಿಯು ಕಾನೂನಿನ ವಿವಾದದಲ್ಲಿರುವುದರಿಂದ, ತಮ್ಮ ಹೆಸರಿಗೆ ಕಳಂಕವಾಗಬಹುದು ಎಂಬ ಆತಂಕವೇ ಇದಕ್ಕೆ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ನೆಲದ ಕಾನೂನಿನ ಪ್ರಕಾರ, ಅಹ್ಮದಿಗಳನ್ನು ಹುತಾತ್ಮ ಎಂದು ಕರೆದರೆ ಸಾಕು, ನಿಮಗೆ ಮೂರು ವರ್ಷ ಜೈಲು ಶಿಕ್ಷೆಯಾಗಬಹುದಾಗಿದೆ ಎಂದು ರಾಜಕಾರಣಿಯೊಬ್ಬರು ತಿಳಿಸಿದ್ದಾರೆ.
ಈ ರೀತಿಯ ಧಾರ್ಮಿಕ ಸಂಗತಿಗಳು ಇಲ್ಲಿ ತೀರಾ ಸಂಕೀರ್ಣವಾಗಿವೆ. ಒಂದೆಡೆ ಅವರನ್ನು ಧಾರ್ಮಿಕ ಬಂಡುಕೋರರು ಎಂದು ಕರೆಯಲಾಗುತ್ತಿದ್ದರೆ, ಮತ್ತೊಂದಿಗೆ ಅವರು ತೀರಾ ನಿರ್ಲಕ್ಷಿಸಲ್ಪಟ್ಟವರೂ ಹೌದು. ಅಧಿಕಾರಿಗಳು ಈ ಪಂಗಡದ ಶವಸಂಸ್ಕಾರಕ್ಕೆ ಸೂಕ್ತ ಭದ್ರತೆಯನ್ನೂ ಒದಗಿಸಿಲ್ಲ ಎಂದೂ ತಿಳಿದುಬಂದಿದೆ.