ಅಫ್ಘಾನಿಸ್ತಾನದ ಅಲ್ ಖಾಯಿದಾ ಮುಖಂಡ, ಒಸಾಮಾ ಬಿನ್ ಲಾಡೆನ್‌ನ ನಂಬಿಕೆಯ ಬಂಟನಾಗಿದ್ದ ಮುಸ್ತಾಫಾ ಅಬು ಅಲ್ ಯಾಜಿದ್ ಅಮೆರಿಕದ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಲ್ ಖಾಯಿದಾ ಮಂಗಳವಾರ ತಿಳಿಸಿದೆ.
ಯಾಜಿದ್ ಈಜಿಪ್ಟ್ ದೇಶದ ಪ್ರಜೆಯಾಗಿದ್ದು, ಈತ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಸ್ಥಾಪಕ ಸದಸ್ಯನಾಗಿದ್ದ. ಅಲ್ಲದೇ ಬಿನ್ ಲಾಡೆನ್‌ನ ಮಾಜಿ ಖಜಾಂಚಿಯಾಗಿದ್ದ. ಈತ ಅಲ್ ಖಾಯಿದಾ ಸಂಘಟನೆಯ 3ನೆಯ ಮುಖಂಡ ಎಂದೇ ಗುರುತಿಸಲಾಗಿತ್ತು. ಈತ ಸಾವನ್ನಪ್ಪಿರುವ ಬಗ್ಗೆ ಇಸ್ಲಾಮಿಸ್ಟ್ ವೆಬ್‌ಸೈಟ್ ತನ್ನ ವರದಿಯಲ್ಲಿ ತಿಳಿಸಿದೆ.
ಆದರೆ ಯಾಜಿದ್ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಬಗ್ಗೆ ವೆಬ್‌ಸೈಟ್ ತನ್ನ ಹೇಳಿಕೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ, ಯಾಜಿದ್, ತನ್ನ ಪತ್ನಿ, ಮೂರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ವರ್ಗವೇ ಬಲಿಯಾಗಿರುವುದಾಗಿ ವಿವರಿಸಿದೆ.
ಅಮೆರಿಕ ನಡೆಸಿದ ಮಿಸೈಲ್ ದಾಳಿಯಲ್ಲಿಯೇ ಯಾಜಿದ್ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧಿಕಾರಿಗಳು ಬಲವಾಗಿ ನಂಬಿದ್ದಾರೆ. ಏತನ್ಮಧ್ಯೆ ಯಾಜಿದ್ ಸಾವಿನ ಕುರಿತು ಅಲ್ ಖಾಯಿದಾ, ವೆಬ್ ಸೈಟ್ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.