ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಧಿತ ಉಗ್ರರನ್ನು ಬಿಡುಗಡೆಗೊಳಿಸಲು ಪಣತೊಟ್ಟು, ನಗರದ ಪ್ರತಿಷ್ಠಿತ ಜಿನ್ನಾ ಆಸ್ಪತ್ರೆಗೆ ಪೊಲೀಸ್ ಸಮವಸ್ತ್ರಧಾರಿಯಾಗಿ ಒಳನುಗ್ಗಿದ ಉಗ್ರರ ಗುಂಪೊಂದು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಕಳೆದ ವಾರ ಮಸೀದಿ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಗೊಂಡ ಉಗ್ರನೊಬ್ಬನನ್ನು ಲಾಹೋರ್ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಬಿಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಮಧ್ಯರಾತ್ರಿ ಜಿನ್ನಾ ಆಸ್ಪತ್ರೆ ಮೇಲೆ ಆರು ಮಂದಿ ಉಗ್ರರು ದಾಳಿ ನಡೆಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು ಎಂದು ಆಸ್ಪತ್ರೆಯ ವರಿಷ್ಠರಾದ ಡಾ.ಜಾವೇದ್ ಅಕ್ರಮ್ ತಿಳಿಸಿದ್ದಾರೆ.
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಗ್ರ ಅಮಿರ್ ಮುವಾಜ್ ಎಂಬಾತನನ್ನು ಅಪಹರಿಸಿಕೊಂಡು ಹೋಗಲು ಉಗ್ರರು ಸಾಕಷ್ಟು ಪ್ರಯತ್ನ ಪಟ್ಟಿರುವುದಾಗಿ ಅಕ್ರಮ್ ದೂರವಾಣಿ ಮೂಲಕ ಮಾಧ್ಯಮಗಳಿಗೆ ವಿವರ ನೀಡಿದ್ದರು.
ಆಸ್ಪತ್ರೆಯೊಳಗೆ ದಾಳಿ ನಡೆಸುವ ಮುನ್ನ ಉಗ್ರರು ವಿದ್ಯುತ್ ದೀಪಗಳನ್ನು ಸಂಪೂರ್ಣ ಧ್ವಂಸಗೊಳಿಸಿದ್ದರು, ಹಾಗಾಗಿ ಕರ್ತವ್ಯ ನಿರತ ಪೊಲೀಸರು ಗೊಂದಲಕ್ಕೆ ಒಳಗಾಗಿದ್ದರು. ಅಲ್ಲದೇ ಉಗ್ರರು ಕೆಲವು ವೈದ್ಯರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ನಡೆಸಿದ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಆದರೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಉಗ್ರ ಅಮಿರ್ ಸಾವನ್ನಪ್ಪಿದ್ದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.