ವಿವಾಹಯೇತರ ಸಂಬಂಧದಿಂದ ಹುಟ್ಟಿರುವ 20ನೇ ಮಗು ತನ್ನದೇ ಮತ್ತು ಆ ಮಗುವಿನ ತಾಯಿಯ ಜೊತೆ ತಾನು ದೈಹಿಕ ಸಂಪರ್ಕ ಹೊಂದಿದ್ದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜೂಮಾ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದ ಬೆನ್ನಲ್ಲೇ, ಇದೀಗ 21ನೇ ಮಗುವಿನ ತಂದೆಯಾಗುತ್ತಿದ್ದಾರಂತೆ!
ಜೂಮಾ ಅವರ ಎರಡನೇ ಹೆಂಡತಿ ನೋಂಪುಮೆಲೆಲೋ ಮಾಂಟುಲಿ ಗರ್ಭಿಣಿಯಾಗಿದ್ದು, ಸದ್ಯದಲ್ಲೇ ಮಗುವನ್ನು ಹೆರಲಿದ್ದಾರಂತೆ. ಆದರೆ ಅಧ್ಯಕ್ಷರು 21ನೇ ಮಗುವಿನ ಅಪ್ಪನಾಗುತ್ತಿರುವ ವಿಷಯವನ್ನು ತುಂಬಾ ರಹಸ್ಯವಾಗಿಡಲಾಗಿದೆಯಂತೆ.
'ಇದೊಂದು ಕುಟುಂಬದ ವಿಷಯ, ಹಾಗಾಗಿ ಅಧ್ಯಕ್ಷರು ಅಪ್ಪನಾಗುತ್ತಿರುವ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ' ಎಂದು ಜೂಮಾ ಅವರ ವಕ್ತಾರ ವಿನ್ಸೆಂಟ್ ಮ್ಯಾಗ್‌ವೆನ್ಯಾ ತಿಳಿಸಿರುವುದಾಗಿ 24 ಡಾಟ್ ಕಾಮ್ ವರದಿ ವಿವರಿಸಿದೆ.
ಈ ಮೊದಲು ಜೂಮಾ ಅವರು ಸೋನೊನೊ ಖೊಜಾ ಎಂಬ ಮಹಿಳೆಗೆ ಹುಟ್ಟಿದ ಮಗು ಅಧ್ಯಕ್ಷರಿಗೆ ಸೇರಿದ್ದು ಎಂಬ ವರದಿಯೊಂದು ದಕ್ಷಿಣ ಆಫ್ರಿಕಾದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೇ ಪ್ರತಿಪಕ್ಷಗಳು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದವು. ನಂತರ ಆ ಮಗು ತನ್ನದೇ ಎಂದು ಜೂಮಾ ಒಪ್ಪಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದರು.
ವಿಶ್ವದಲ್ಲೇ ಅತೀ ಹೆಚ್ಚು ಎಚ್ಐವಿ-ಏಡ್ಸ್ ಪ್ರಕರಣಗಳಿಂದ ನಲುಗುತ್ತಿರುವ ದೇಶಗಳಲ್ಲೊಂದಾದ ದಕ್ಷಿಣ ಆಫ್ರಿಕಾದ ಅಧ್ಯಕ್ಷರೇ ಹೀಗೆ ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವ ಮೂಲಕ ಸರಕಾರದ ಆರೋಗ್ಯ ಕಾರ್ಯಕ್ರಮಕ್ಕೆ ಭಂಗ ತರುತ್ತಿದ್ದಾರೆ ಎಂದು ಭಾರೀ ಟೀಕೆಗಳು ವ್ಯಕ್ತವಾಗಿದ್ದವು.