ನೌಕಾ ನೆಲೆ ವಿವಾದದ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಯೂಕಿಯೋ ಹಾಟೋಯಾಮಾ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಪಟ್ಟಕ್ಕೆ ಏರಿದ ಎಂಟು ತಿಂಗಳಲ್ಲಿಯೇ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಂತಾಗಿದೆ.
ದಕ್ಷಿಣ ದ್ವೀಪಪ್ರದೇಶವಾದ ಓಕಿನಾವಾದಲ್ಲಿ ಅಮೆರಿಕದ ನೌಕನೆಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಯೂಕಿಯೋ ಅದನ್ನು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ.
ಪ್ರಧಾನಿ ಆರಂಭಿಕವಾಗಿ ದ್ವೀಪಪ್ರದೇಶದಲ್ಲಿನ ಅಮೆರಿಕದ ನೌಕನೆಲೆಯನ್ನು ಮುಚ್ಚುವ ಬಗ್ಗೆ ಭರವಸೆ ನೀಡಿದ್ದರು. ಆದರೆ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದು, ವಾಷಿಂಗ್ಟನ್ ಜೊತೆ ಸೌಹಾರ್ದತೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನೌಕನೆಲೆ ಮುಚ್ಚುವ ನಿರ್ಧಾರ ಕೈಬಿಟ್ಟಿದ್ದೆ ವಿವಾದಕ್ಕೆ ಸಿಲುಕುವಂತಾಗಿತ್ತು.
ಈ ಕುರಿತು ವಿಶೇಷ ಸಂಸತ್ ಸಭೆ ಕರೆದು ದುಃಖತಪ್ತರಾಗಿಯೇ ಮಾತನಾಡಿದ ಪ್ರಧಾನಿ, ತಾನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದರು. ಅಲ್ಲದೇ ತಮ್ಮ ನೇತೃತ್ವದ ಡೆಮೋಕ್ರಟಿಕ್ ಪಾರ್ಟಿ ಜಪಾನ್ ಅನ್ನು ಮತ್ತೆ ಹೊಸದಾಗಿ ರಚಿಸುವುದಾಗಿಯೂ ಶಪಥಗೈದರು.