ಅಂತಾರಾಜ್ಯ ಸಂಚಾರ ಮಾಡುತ್ತಿರುವಾಗ ಗೂಗಲ್ ಮ್ಯಾಪ್‌ನಲ್ಲಿ ತಪ್ಪು ಮಾರ್ಗದರ್ಶನ ಮಾಡಿದ್ದಕ್ಕಾಗಿ ಲಾಸ್ ಏಂಜಲೀಸ್ ಮಹಿಳೆಯೊಬ್ಬರು ಗೂಗಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ಡಾಲಿ ಸ್ಟ್ರೀಟ್‌ನಿಂಗ ಪ್ರಾಸ್ಪೆಕ್ಟರ್ ಅವೆನ್ಯೂಗೆ ನಡೆದುಹೋಗುವ ದಾರಿಯ ಮಾರ್ಗದರ್ಶನಕ್ಕಾಗಿ ಲಾರೆನ್ ರೋಸೆನ್‌ಬರ್ಗ್ ಎಂಬಾಕೆ ತನ್ನ ಬ್ಲ್ಯಾಕ್‌ಬೆರಿ ಸಾಧನವನ್ನು ಬಳಸಿದ್ದಳು.
ಆದರೆ, ಗೂಗಲ್ ನಕಾಶೆ ತೋರಿಸಿದ ಪ್ರಕಾರ ಹೋದ ಕಾರಣ, ಆಕೆ ಅತ್ಯಂತ ಜನನಿಬಿಡವಾದ ಹೆದ್ದಾರಿ ತಲುಪಿದ್ದು, ಅಲ್ಲಿ ಆಕೆಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ತನ್ನ ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ಎಂದು ಆಕೆ ಒಪ್ಪಿಕೊಂಡಿದ್ದರೂ, ಆದರೆ ಜನನಿಬಿಡ ಹೆದ್ದಾರಿಗೆ ತನ್ನನ್ನು ಕರೆದೊಯ್ದಿದ್ದಕ್ಕೆ ಗೂಗಲ್ ಕೂಡ ಕಾರಣ ಎಂದಾಕೆ ವಾದಿಸಿದ್ದಾಳೆ.
ಗೂಗಲ್ ಅಸುರಕ್ಷಿತ ಮಾರ್ಗವನ್ನು ತೋರಿಸಿದೆ. ಇದರಿಂದ ತನ್ನ ಕಕ್ಷಿದಾರರು ಅಪಾಯಕಾರಿ ಹೆದ್ದಾರಿಗೆ ಹೋಗುವಂತಾಯಿತು ಎಂದು ಲಾರೆನ್ ವಕೀಲರು ವಾದಿಸಿದ್ದಾರೆ.
ಈ ಪ್ರದೇಶದ ನಕಾಶೆಯನ್ನು ಕಂಪ್ಯೂಟರ್ ಮೂಲಕ ನೋಡಿದಾಗ, ಅದರಲ್ಲಿ, "ಎಚ್ಚರಿಕೆ, ಕಾಲುದಾರಿ ಅಥವಾ ಪಾದಚಾರಿ ಮಾರ್ಗಗಳಿಲ್ಲ" ಎಂಬ ಎಚ್ಚರಿಕೆ ಇತ್ತು. ಆದರೆ ಈ ಎಚ್ಚರಿಕೆ ಬ್ಲ್ಯಾಕ್‌ಬೆರಿಯಲ್ಲಿ ಪ್ರದರ್ಶನವಾಗಿತ್ತೇ ಎಂಬುದು ಖಚಿತವಾಗಿಲ್ಲ. ಈ ವಿಷಯದ ಬಗ್ಗೆ ಗೂಗಲ್ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.