ಭಾರತದ ಬಗ್ಗೆ ನಾನು ಭ್ರಮ ನಿರಸನಗೊಂಡಿದ್ದೇನೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಮತ್ತಷ್ಟು ಪ್ರಬುದ್ಧತೆಯಿಂದ ವರ್ತಿಸಬೇಕು ಎಂದು ನೀತಿ ಪಾಠ ಹೇಳಿದ್ದಾರೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ.
ಸಂದರ್ಶನವೊಂದರಲ್ಲಿ ಈ ರೀತಿ ಬಡಬಡಿಸಿದ ಅವರು, ನಾವು ಕೂಡ ನಮ್ಮ ಪೂರ್ವ ಮತ್ತು ಪಶ್ಚಿಮ ಗಡಿಗಳಿಂದ ಬೆದರಿಕೆ ಎದುರಿಸುತ್ತಿದ್ದೇವೆ ಎಂದಿದ್ದಾರೆ.
ಒಂದು ಕಾಲದಲ್ಲಿ ನಮ್ಮವನು ಅಲ್ಲವೇ ಅಲ್ಲ ಎಂದು ಹೇಳುತ್ತಿದ್ದ, ಮುಂಬೈ ದಾಳಿಯಲ್ಲಿ ಜೀವಂತ ಸೆರೆಸಿಕ್ಕಿದ್ದ ಏಕೈಕ ಉಗ್ರಗಾಮಿ, ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್‌ನನ್ನು ತಮ್ಮ ದೇಶಕ್ಕೆ ವಿಚಾರಣೆಗೆ ಒಪ್ಪಿಸುವ ಕುರಿತಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು ಎಂಬುದು ವಿಶೇಷ.
ಅಂತೆಯೇ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿದ್ದ ಪಾಕಿಸ್ತಾನೀ ಅಮೆರಿಕನ್ ಉಗ್ರಗಾಮಿ ಫೈಸಲ್ ಶಹಜಾದ್‌ಗೆ ಕೂಡ ಪಾಕಿಸ್ತಾನದ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಳ್ಳಲಸು ಜರ್ದಾರಿ ಯತ್ನಿಸಿದರು. ಶಹಜಾದ್ ಪಾಕಿಸ್ತಾನೀಯನಲ್ಲ, ಆತ ಅಮೆರಿಕದ ಪ್ರಜೆ ಎಂದವರು ಹೇಳಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಅಮೆರಿಕಗಳ ನಡುವಿನ ಸಹಕಾರ ಉತ್ತಮವಾಗಿಯೇ ಇದೆ ಎಂದು ಕೂಡ ಜರ್ದಾರಿ ಹೇಳಿದರು.