ಟ್ಯಾಕ್ಸಿ ಚಾಲಕನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 25ಜನರು ಗಾಯಗೊಂಡಿರುವ ಘಟನೆ ಇಂಗ್ಲೆಂಡ್‌ನ ವಾಯುವ್ಯ ಪ್ರಾಂತ್ಯದಲ್ಲಿ ಬುಧವಾರ ನಡೆದಿದೆ. ಗುಂಡು ಹಾರಿಸಿದ ಚಾಲಕ ಕೊನೆಗೆ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದು, ಇದು 1996ರ ನಂತರ ಲಂಡನ್‌ನಲ್ಲಿ ನಡೆದ ಭೀಕರ ಘಟನೆಯಾಗಿದೆ.
ಏಕಾಏಕಿ ನಡೆದ ಈ ಘಟನೆಯಿಂದಾಗಿ ಆಘಾತಕ್ಕೊಳಗಾಗಿರುವುದಾಗಿ ಬ್ರಿಟನ್ ಸಚಿವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಇನ್ಮುಂದೆ ಇಂತಹ ಘಟನೆ ನಡೆಯದಂತೆ ತಡೆಗಟ್ಟುವುದಾಗಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡುತ್ತ ಭರವಸೆ ನೀಡಿದರು.
ಟ್ಯಾಕ್ಸಿ ಚಾಲಕ 52ರ ಹರೆಯದ ಡೆರ್ರಿಕ್ ಬಿರ್ಡ್ ಗುಂಡಿನ ದಾಳಿ ನಡೆಸಿ, ನಂತರ ತಾನು ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ, ಆತನ ಮೃತದೇಹವನ್ನು ಲೇಕ್ ಜಿಲ್ಲೆಯಲ್ಲಿ ಪತ್ತೆ ಹಚ್ಚಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟ್ಯಾಕ್ಸಿ ಚಾಲಕ ಉಪಯೋಗಿಸಿದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಆತ ಯಾವ ಕಾರಣಕ್ಕಾಗಿ ಗುಂಡಿನ ದಾಳಿ ನಡೆಸಿದ್ದಾನೆ ಎಂಬ ವಿವರ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.