ಮಹಿಳೆಯೊಬ್ಬಳು ತೀರಾ 'ಹಾಟ್' ಆಗಿದ್ದು, ತಮ್ಮ ಏಕಾಗ್ರತೆಗೆ ಭಂಗವಾಗುತ್ತಿದೆ, ಕೆಲಸದ ಮೇಲೆ ಪೂರ್ಣ ಗಮನ ನೀಡಲಾಗುತ್ತಿಲ್ಲ ಎಂದು ಪುರುಷ ಉದ್ಯೋಗಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ವಜಾಗೊಂಡ ಈ ಯುವತಿಯೊಬ್ಬಳು, ಇದೀಗ ಸಿಟಿ ಬ್ಯಾಂಕ್ ವಿರುದ್ಧ ಕೇಸು ದಾಖಲಿಸಿದ್ದಾಳೆ.
ತಾನು ವೃತ್ತಿಪರತೆಯಿಂದ ಕೆಲಸ ಮಾಡುತ್ತಿದ್ದರೂ, ಹಣದ ಝಣ ಝಣ ನಡುವೆ ತಾನು ಹಾಟ್ ಆಗಿ ಬಾಸ್ ಮತ್ತು ಸಹೋದ್ಯೋಗಿಗಳಿಗೆ ಕಂಡಿರುವುದರಿಂದ ಈ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಡೆಬ್ರಾಲೀ ಲೊರೆಂಜನಾ ಎಂಬಾಕೆ ಹೇಳಿದ್ದಾಳೆ.
ಉದ್ಯೋಗಕ್ಕೆ ಸೇರಿದಂದಿನಿಂದ ಬ್ಯಾಂಕ್‌ನ ಶಾಖಾ ಪ್ರಬಂಧಕರು ಮತ್ತು ಸಹಾಯಕ ಪ್ರಬಂಧಕರು ಆಕೆಯ ಉಡುಗೆ ತೊಡುಗೆ ಬಗ್ಗೆ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಾ, ಅದು ತೊಡಬಾರದು, ಇದು ಉಡಬಾರದು ಎಂದೆಲ್ಲಾ ತಾಕೀತು ಮಾಡುತ್ತಿದ್ದರು ಎಂದು ಆಕೆ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಆಕೆಯ ದೇಹಸಿರಿಗೆ ಈ ಫ್ಯಾಶನ್ ಉಡುಪುಗಳು ಒಪ್ಪುತ್ತಿದ್ದವಾದರೂ, ಪುರುಷ ಸಹೋದ್ಯೋಗಿಗಳ ಗಮನ ಬೇರೆಡೆ ಸೆಳೆಯುವಂತೆ ಮಾಡುತ್ತಿವೆ. ಇದು ಬ್ಯಾಂಕ್ ವ್ಯವಹಾರಗಳಲ್ಲಿ ತಪ್ಪುಗಳಾಗಲೂ ಕಾರಣವಾಗುತ್ತಿದ್ದವು ಎಂಬುದು ಈ ಮೇಲಧಿಕಾರಿಗಳ ಆರೋಪವಾಗಿತ್ತು.
ನೋಡಲು ಚೆನ್ನಾಗಿಲ್ಲದ ಇತರ ಮಹಿಳಾ ಉದ್ಯೋಗಿಗಳಿಗೆ ಈ ರೀತಿಯ ಉಡುಗೆ ತೊಡಲು ಯಾವುದೇ ನಿರ್ಬಂಧಗಳಿರಲಿಲ್ಲ. ಆದರೆ ಈಕೆಯ ದೇಹ ಸಿರಿಯು ಇಂತಹಾ ಆಧುನಿಕ ಉಡುಪುಗಳಲ್ಲಿ ಎದ್ದುಕಾಣುವುದರಿಂದ ಇದನ್ನು ತೊಡಬಾರದು ಎಂಬ ಸೂಚನೆಯೂ ತನಗಿತ್ತು. ತಾನು ಈ ಬಗ್ಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರೂ, ಹೊಸ ಶಾಖೆಗೆ ವರ್ಗ ಮಾಡಲಾಯಿತು. ಆದರೂ, ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸುವಲ್ಲಿ ವಿಫಲಳಾಗಿದ್ದಾಳೆ ಎಂಬ ಕಾರಣಕ್ಕೆ ಛೀಮಾರಿ ಹಾಕಲಾಗಿತ್ತು. ಸಾಕಷ್ಟು ಹೊಸ ಖಾತೆಗಳನ್ನು ಸೇರ್ಪಡೆಗೊಳಿಸುವಲ್ಲಿ ಆಕೆ ವಿಫಲಳಾಗಿದ್ದಾಳೆ ಎಂದು ಕಾರಣ ನೀಡಿ ಉದ್ಯೋಗದಿಂದ ವಜಾಗೊಳಿಸಲಾಯಿತು.
ತಾನು ವಂಶಪಾರಂಪರ್ಯವಾಗಿ ಈ ರೀತಿಯ ದೇಹ ಹೊಂದಿರುವುದು ಶಾಪವೇ? ಎಂದಾಕೆ ಪ್ರಶ್ನಿಸಿದ್ದಾಳೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಟಿ ಬ್ಯಾಂಕ್, ಆಕೆ ದಾಖಲಿಸಿದ ಪ್ರಕರಣಕ್ಕೆ ತಲೆಬುಡವಿಲ್ಲ. ನಾವು ಇದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದಿದೆ.