ದೇಶದ 156 ಮಿಲಿಯನ್ ಜನಸಂಖ್ಯೆ ದೊಡ್ಡ ಹೊರೆಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ, ಆ ನಿಟ್ಟಿನಲ್ಲಿ ನಾವು ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳುವ ಜಾಣತನ ತೋರಬೇಕಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಹೆಚ್ಚಳವಾಗುತ್ತಿರುವ ಜನಸಂಖ್ಯೆ ಬಗ್ಗೆ ನಾವು ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹಸೀನಾ ಸಂಸತ್ ಅನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿವರಿಸಿದ್ದು, ಬೃಹತ್ ಜನಸಂಖ್ಯೆಯನ್ನು ಸದ್ಭಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಹೆಚ್ಚಿನ ಜನಸಂಖ್ಯೆ ದೇಶಕ್ಕೆ ದೊಡ್ಡ ಹೊರೆ ಎಂಬುದನ್ನು ತಾನು ಯೋಚಿಸಲಾರೆ, ಆ ನಿಟ್ಟಿನಲ್ಲಿ ಅದು ನಮ್ಮ ಸಾಮರ್ಥ್ಯದ ಸಂಕೇತ ಎಂದು ಬಣ್ಣಿಸಿದ ಅವರು, ಆ ನೆಲೆಯಲ್ಲಿ ಜನರಿಗೆ ತಕ್ಕ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಬಾಂಗ್ಲಾದೇಶ ಕೂಡ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ದೇಶದ ಜನಸಂಖ್ಯೆಯ ನಾಗಾಲೋಟಕ್ಕೆ ಕಡಿವಾಣ ಹಾಕಲು, ಒಂದು ಜೋಡಿಗೆ ಒಂದೇ ಮಗು ಎಂಬ ಘೋಷಣೆ ಜಾರಿಗೆ ತರುವುದಾಗಿ ಕಳೆದ ವರ್ಷ ಬಾಂಗ್ಲಾ ಸರ್ಕಾರ ತಿಳಿಸಿತ್ತು.