ಪಂಜಾಬ್ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿರುವ ನಿಷೇಧಿತ ಉಗ್ರಗಾಮಿ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಲಿದ್ದು, ಆ ಬಗ್ಗೆ ಮಿಲಿಟರಿ ದಾಳಿ ನಡೆಸುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮುಖಾಮುಖಿ ಸಂದರ್ಭದಲ್ಲಿ ಮಲಿಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಲಷ್ಕರ್ ಇ ಜಾಂಘ್ವಿ, ಸಿಫಾ ಇ ಸಿಹಾಬಾ ಸೇರಿದಂತೆ ಹಲವಾರು ನಿಷೇಧಿತ ಉಗ್ರಗಾಮಿ ಸಂಘಟನೆಗಳು ಪಂಜಾಬ್ ಭಾಗದಲ್ಲಿ ಸಕ್ರಿಯವಾಗಿವೆ ಎಂದು ಅವರು ಹೇಳಿದರು.
ಆ ನೆಲೆಯಲ್ಲಿ ಗುಪ್ತಚರ ಇಲಾಖೆಯ ಮುನ್ಸೂಚನೆಯ ಆಧಾರದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಮಲಿಕ್ ಸ್ಪಷ್ಟಪಡಿಸಿದರು. ಅವರೆಲ್ಲ ಭಯೋತ್ಪಾದಕರಾಗಿದ್ದಾರೆ. ಸಂಘಟನೆಗೆ ನಿಷೇಧ ಹೇರಿದ ನಂತರವೂ ಅವು ಪಂಜಾಬ್‌ನಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು.
ಈಗಾಗಲೇ ಪಾಕಿಸ್ತಾನದ ಬುಡಕಟ್ಟು ಪ್ರದೇಶ ಮತ್ತು ದಕ್ಷಿಣ ವಜಿರಿಸ್ತಾನದ ಭಾಗದಲ್ಲಿ ಠಿಕಾಣಿ ಹೂಡಿದ್ದ ತಾಲಿಬಾನ್ ಉಗ್ರರ ವಿರುದ್ಧ ಸರ್ಕಾರ ಕಾರ್ಯಾಚರಣೆ ನಡೆಸುವ ಮೂಲಕ ಯಶಸ್ಸು ಗಳಿಸಿದೆ. ಅದೇ ರೀತಿ ಪಂಜಾಬ್ ಪ್ರಾಂತ್ಯದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.