ಬಾಂಗ್ಲಾದೇಶ ರಾಜಧಾನಿ ಢಾಕಾ ಸಮೀಪ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿರುವ ಭೀಕರ ಅಗ್ನಿ ಅನಾಹುತಕ್ಕೆ ಆಹುತಿಯಾದವರ ಸಂಖ್ಯೆ 108ಕ್ಕೇರಿದೆ. ಇತ್ತೀಚಿನ ದಿನಗಳಲ್ಲೇ ಅತಿ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ ದುರಂತದ ರಕ್ಷಣಾ ಕಾರ್ಯಾಚರಣೆಯನ್ನು ಅಗ್ನಿಶಾಮಕ ದಳಗಳು ಇದೀಗ ನಿಲ್ಲಿಸಿವೆ.
ಢಾಕಾದ ಜನನಿಭಿಡ ಪ್ರದೇಶ ಕಾಯೆಟ್ಟುಲಿ ಎಂಬಲ್ಲಿನ ಬಹುಮಹಡಿ ವಸತಿ ಸಮುಚ್ಚಯಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ನೂರಾರು ಮಂದಿ ನಿವಾಸಿಗಳು ಕಟ್ಟಡದಲ್ಲಿ ಸಿಕ್ಕಿಬಿದ್ದಿದ್ದರು. ಸುಮಾರು ಮೂರು ಗಂಟೆಗಳ ಕಾಲ ಹೊತ್ತಿ ಉರಿದ ಕಟ್ಟಡದಲ್ಲಿ ಕೆಲವರನ್ನು ಮಾತ್ರ ಬಚಾವ್ ಮಾಡಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದವರೂ ಸೇರಿದಂತೆ ದುರಂತಕ್ಕೆ ಕನಿಷ್ಠ 108 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಮುಹಿಬುಲ್ ಹಕ್ ತಿಳಿಸಿದ್ದಾರೆ.
ಈ ಅಪಾರ್ಟ್‌ಮೆಂಟ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿದೆ. ನಂತರ ಮದುವೆ ಊಟಕ್ಕಾಗಿ ನಡೆಸುತ್ತಿದ್ದ ಅಡುಗೆಯಿಂದಾಗಿ ಬೆಂಕಿಯ ಜ್ವಾಲೆ ಹೆಚ್ಚಾಗಿದೆ. ಇದು ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೆಲವರು ಓಡಿ ಪಾರಾಗಿದ್ದಾರೆ. ಆದರೆ ಉಳಿದವರಲ್ಲಿ ಕೆಲವರು ಉಸಿರುಗಟ್ಟಿ ಹಾಗೂ ಸುಟ್ಟಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮದುಮಗಳು ಸಮೀಪದ ಬ್ಯೂಟಿ ಪಾರ್ಲರ್‌ಗೆ ತೆರಳಿದ್ದರಿಂದಾಗಿ ಆಕೆ ಪ್ರಾಣ ಉಳಿಸಿಕೊಂಡಿದ್ದಾಳೆ ಎಂದು ಚಾನೆಲ್‌ಗಳು ವರದಿ ಮಾಡಿವೆ.