ಪೋಲ್ಯಾಂಡ್ ಅಧ್ಯಕ್ಷರ ವಿಮಾನ ಅಪಘಾತಕ್ಕೀಡಾದ ನಂತರ ರಷ್ಯಾದ ಮೂರು ಪೊಲೀಸ್ ಅಧಿಕಾರಿಗಳು ಲೂಟಿ ಮಾಡಿರುವುದಾಗಿ ಪೋಲ್ಯಾಂಡ್ ಗಂಭೀರವಾಗಿ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ಸಾರಸಗಟಾಗಿ ತಳ್ಳಿಹಾಕಿದೆ.
ಏಪ್ರಿಲ್ 10ರಂದು ಸೋವಿಯತ್ ನಿರ್ಮಿತ ಟಿಯು-154 ವಿಮಾನ ಸ್ಮೋಲೆನ್ಸಕ್ ನಗರದ ಸಮೀಪ ದುರಂತಕ್ಕೀಡಾಗಿತ್ತು. ಘಟನೆಯಲ್ಲಿ ಪೋಲ್ಯಾಂಡ್ ಅಧ್ಯಕ್ಷ ಲೆಚ್ ಕಾಝಾನ್ಸಿಕಿ ಮತ್ತು ಅವರ ಪತ್ನಿ, ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ 96 ಪ್ರಯಾಣಿಕರು ಸಾವನ್ನಪ್ಪಿದ್ದರು.
ಅವರೆಲ್ಲ 1940ರ ನಡೆದ ಕಾಟ್ಯಾನ್ ಹತ್ಯಾಕಾಂಡದಲ್ಲಿ ಬಲಿಪಶುವಾದವರ ಸ್ಮರಣಾರ್ಥದ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪೋಲ್ಯಾಂಡ್ ಅಧಿಕಾರಿ ಅಂಡ್ರೆಜೈ ಪ್ರಜೆವಾಜ್ನಿಕ್ ಕೂಡ ಸಾವನ್ನಪ್ಪಿದ್ದು, ಅವರ ಬ್ಯಾಂಕ್ ಖಾತೆಯ ಕಾರ್ಡನ್ನು ವಶಕ್ಕೆ ತೆಗೆದುಕೊಂಡು ಮೂರು ಮಂದಿ ರಷ್ಯಾದ ಸ್ಪೆಷಲ್ ಪರ್ಪಸ್ ಪೊಲೀಸ್ ಯೂನಿಟ್ (ಓಎಂಓಎನ್) ಅಧಿಕಾರಿಗಳು ಕಾನೂನುಬಾಹಿರವಾಗಿ ಉಪಯೋಗಿಸಿರುವುದಾಗಿ ಪೋಲ್ಯಾಂಡ್ ಸರ್ಕಾರದ ವಕ್ತಾರ ಪಾವೆಲ್ ಗ್ರಾಸ್ ದೂರಿದ್ದಾರೆ.
ಏತನ್ಮಧ್ಯೆ ಈ ನಾಚಿಕೆಗೇಡಿನ ಕೃತ್ಯ ಎಸಗಿದ ಒಎಂಓಎನ್‌ನ ಮೂರು ಅಧಿಕಾರಿಗಳನ್ನು ಪೋಲ್ಯಾಂಡ್ ಡೆಮೊಸ್ಟಿಕ್ ಸೆಕ್ಯುರಿಟಿ ಏಜೆನ್ಸಿ ಮತ್ತು ರಷ್ಯಾ ಸ್ಪೆಶಲ್ ಸರ್ವಿಸ್ ಅಧಿಕಾರಿಗಳು ಸೆರೆ ಹಿಡಿದಿರುವುದಾಗಿ ತಿಳಿಸಿದೆ.
ಇದೊಂದು ಸುಳ್ಳು ಸುದ್ದಿ ಎಂದಿರುವ ರಷ್ಯಾದ ಆಂತರಿಕ ಸಚಿವಾಲಯ, ಪೋಲ್ಯಾಂಡ್ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಮೂರು ಮಂದಿ ಅಧಿಕಾರಿಗಳನ್ನು ಬಂಧಿಸಿರುವ ಸುದ್ದಿ ಕೂಡ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.